ಕೇಂದ್ರೀಯ ವಿದ್ಯಾಲಯ ಮಾದರಿಸರ್ಕಾರಿ ಇಂಗ್ಲಿಷ್ ಶಾಲೆ ಅಭಿವೃದ್ಧಿ
ಮೈಸೂರು

ಕೇಂದ್ರೀಯ ವಿದ್ಯಾಲಯ ಮಾದರಿಸರ್ಕಾರಿ ಇಂಗ್ಲಿಷ್ ಶಾಲೆ ಅಭಿವೃದ್ಧಿ

June 15, 2019

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಗೊಂಡಿರುವ ಸರ್ಕಾರಿ ಇಂಗ್ಲಿಷ್ ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಅಷ್ಟೇ ಅಲ್ಲ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾವಕಾಶವನ್ನು 30 ರಿಂದ 60 ಇಲ್ಲವೆ 90ಕ್ಕೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ವಿಧಾನಸೌಧದ ಬ್ಯಾಂಕ್ವೇಟ್ ಹಾಲ್‍ನಲ್ಲಿ ಸರ್ಕಾರಿ ಇಂಗ್ಲಿಷ್ ಶಾಲೆಗಳ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆಗಳನ್ನು ತೆರೆಯಲು ಕನ್ನಡ ಸಂಘ ಸಂಸ್ಥೆ ಹಾಗೂ ಸಾಹಿತಿಗಳಿಂದ ತೀವ್ರ ವಿರೋಧ ವ್ಯಕ್ತ ವಾಯಿತು. ಸ್ಪರ್ಧಾಯುಗದಲ್ಲಿ ಗ್ರಾಮೀಣ, ಬಡವರ ಮಕ್ಕಳು ಇಂಗ್ಲಿಷ್ ಕಲಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶ ದಿಂದ ಎಲ್ಲ ವಿರೋಧಗಳನ್ನು ಹತ್ತಿಕ್ಕಿ ಪ್ರಸಕ್ತ ವರ್ಷ ಒಂದು ಸಾವಿರ ಶಾಲೆಗಳಲ್ಲಿ ತರಗತಿಗಳನ್ನು ಆರಂಭಿಸಲಾಗುತ್ತಿದೆ.

ಇದಕ್ಕಾಗಿ ಒಂದು ಸಾವಿರ ಶಿಕ್ಷಕರಿಗೆ ಈಗಾಗಲೇ ಇಲಾಖೆ ವಿಶೇಷ ತರಬೇತಿ ಕೊಡಿಸಿದೆ. ಪ್ರತಿ ತರಗತಿಯಲ್ಲಿ 30 ವಿದ್ಯಾರ್ಥಿ ಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆದರೆ 100 ರಿಂದ 150 ಅರ್ಜಿಗಳು ಪ್ರವೇಶ ಬಯಸಿ ಬಂದಿವೆ. ಗುಣಾತ್ಮಕ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಪ್ರಥಮ ಹಂತದಲ್ಲಿ ಪ್ರವೇಶ ಸೀಮಿತ ಗೊಳಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಅದರ ಸಂಖ್ಯೆ ಹೆಚ್ಚಳ ಮಾಡಲಾಗುವುದು, ಇದರ ಜೊತೆಗೆ ಅಗತ್ಯ ಸಿಬ್ಬಂದಿ ಇತರೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದೆಂದರು. ಇದರಿಂದ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಪ್ರತಿ ವರ್ಷ ಸಾವಿ ರಾರು ರೂಪಾಯಿ ಉಳಿತಾಯ ವಾಗುತ್ತಿದ್ದರೆ, ಮತ್ತೊಂದೆಡೆ ರೈತರ ಮಾದರಿಯಲ್ಲೇ ಶಿಕ್ಷಣ ಕೊಡಿಸಲಾಗದ ಕುಟುಂಬ ವರ್ಗ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ತಿಲಾಂಜಲಿ ಇಟ್ಟಂತಾಗಿದೆ. ಸ್ಪರ್ಧಾಯುಗದಲ್ಲಿ ಗ್ರಾಮೀಣ ಮಕ್ಕಳು ಕೂಡಾ ಇತರ ಮಕ್ಕಳಿಗೆ ಸರಿಸಮನಾಗಿ ಶಿಕ್ಷಣ ಪಡೆದು, ಉದ್ಯೋಗ ಪಡೆಯ ಬೇಕು. ಇಂಗ್ಲಿಷ್ ಶಾಲೆ ತೆರೆದ ತಕ್ಷಣವೇ ನಾವು ಕನ್ನಡ ವಿರೋಧಿಗಳಾ ಗುವುದಿಲ್ಲ. ನಮ್ಮ ಅಭಿಮಾನ ತಾಯಿ ಭಾಷೆಗೆ ಇದ್ದೆ ಇರುತ್ತದೆ. ಆದರೆ ಬಡವರು ಮತ್ತು ಗ್ರಾಮೀಣ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುವುದು ಸರ್ಕಾರದ ಆದ್ಯ ಕರ್ತವ್ಯ. ಸರ್ಕಾರಿ ಶಾಲೆಗಳಿಗೆ ಮಕ್ಕಳಿಲ್ಲದೆ, ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂಗ್ಲಿಷ್ ವಿಭಾಗ ತೆರೆದ ನಂತರ ಭಾರೀ ಬೇಡಿಕೆ ಬಂದಿದೆ. ಇಂಗ್ಲಿಷ್ ಜೊತೆಗೆ ಕನ್ನಡ ಶಾಲೆಗಳನ್ನು ಉಳಿಸಿಕೊಂಡು ಆ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಿದ ಮಾತ್ರಕ್ಕೆ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ ಎಂಬ ಭಾವನೆ ಬರುವುದು ಬೇಡ ಎಂದರು.

ಕನ್ನಡದ ಕಾಳಜಿ ಬಗ್ಗೆ ಯಾರಿಗೂ ಅನುಮಾನ ಬೇಡ. ಕನ್ನಡ ತಾಯಿ ನಮ್ಮೊಳಗೆ ಇದ್ದಾರೆ. ತಾಯಿ ಭಾಷೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ. ನಾವೆಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದವರು. ನಮ್ಮ ಶಾಲೆಯಲ್ಲೂ ಒಳ್ಳೆಯ ಶಿಕ್ಷಣ ದೊರೆಯಲಿ ಎಂಬ ಕಾರಣಕ್ಕೆ ಇಂತಹ ನಿರ್ಧಾರ ಕೈಗೊಂಡಿದ್ದೇವೆ.

ಒಂದು ಸಾವಿರ ಆಂಗ್ಲ ಶಾಲೆ ಪ್ರಾರಂಭ ಮಾಡುವ ಐತಿಹಾಸಿಕ ತೀರ್ಮಾನ ಕೈಗೊಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಭಿನಂದಿಸುತ್ತೇನೆ. ಅನೇಕ ಗೊಂದಲಗಳ ನಡುವೆಯೂ ಅವರು ಇಂತಹ ತೀರ್ಮಾನ ಕೈಗೊಂಡಿದ್ದಾರೆ.

ಶಿಕ್ಷಣದಿಂದ ಮನುಷ್ಯ ಮಾತ್ರವಲ್ಲ, ಸಮಾಜ ಹಾಗೂ ದೇಶವನ್ನೂ ಕೂಡ ಬದಲಾ ವಣೆ ಮಾಡಬಹುದು. ಯಾವುದೇ ಅಭಿವೃದ್ಧಿ ಹೊಂದಿದ ದೇಶವನ್ನು ಗಮನಿಸಿದರೆ ಆ ರಾಷ್ಟ್ರದಲ್ಲಿ ಶಿಕ್ಷಣ ಬಹುದೊಡ್ಡ ಬದಲಾವಣೆ ಮಾಡಿರುತ್ತದೆ. ನಮ್ಮ ರಾಷ್ಟ್ರದ ಸರಾಸರಿ ಸಾಕ್ಷರತೆ ಪ್ರಮಾಣ ಶೇ.78ರಷ್ಟಿದೆ. ಇದು ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಕಡಿಮೆ ಸಾಧನೆಯಲ್ಲ ಎಂದು ಹೇಳಿದರು.

Translate »