ಮಾಸಾಶನಕ್ಕೆ ಆಧಾರ್ ಲಿಂಕ್ ಕಡ್ಡಾಯ
ಮೈಸೂರು

ಮಾಸಾಶನಕ್ಕೆ ಆಧಾರ್ ಲಿಂಕ್ ಕಡ್ಡಾಯ

September 20, 2018
  • ಸರ್ಕಾರದ ಆದೇಶ
  • ದುರುಪಯೋಗ ತಡೆಗೆ ಕ್ರಮ

ಬೆಂಗಳೂರು: ಅಂಗವಿಕಲ, ವಿಧವಾ, ವಯೋವೃದ್ಧ ವೇತನ ಸೇರಿದಂತೆ ಮಾಸಾಶನ ಪಡೆಯಲು ಇನ್ನು ಮುಂದೆ ತಮ್ಮ ಸಂಖ್ಯೆಗಳಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್‍ನ್ನು ಜೋಡಿಸಿಕೊಳ್ಳುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ವಯೋವೃದ್ಧರಿಗೆ ನೀಡುತ್ತಿದ್ದ ಮಾಸಾಶನವನ್ನು 600 ರಿಂದ 1000 ರೂಪಾಯಿಗೆ ಹೆಚ್ಚಳ ಮಾಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಆಧಾರ್ ಕಡ್ಡಾಯಗೊಳಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ದಿನದ ಕೊಡುಗೆಯಾಗಿ ವಯೋವೃದ್ಧರಿಗೆ ಮಾಸಾಶನ ಹೆಚ್ಚಳ ಮಾಡಿದ್ದು, ಅದು ನವೆಂಬರ್ 1 ರಿಂದ ಜಾರಿಗೆ ಬರಲಿದೆ. ನಕಲು ದಾಖಲೆಗಳ ಸೃಷ್ಟಿಸಿ, ಕೆಲವರು ವಿವಿಧ ಮಾಸಾಶನಗಳನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ನಕಲಿಗೆ ಕಡಿವಾಣ ಹಾಕುವ ಉದ್ದೇಶದಿಂದ ಇನ್ನು ಮುಂದೆ ಇಂತಹ ಪಿಂಚಣಿ ಪಡೆಯುತ್ತಿರುವವರು ಕಡ್ಡಾಯವಾಗಿ ತಮ್ಮ ಸಂಖ್ಯೆಗೆ ಆಧಾರ್ ಕಾರ್ಡ್ ಅಂಕಿ ಜೋಡಿಸಬೇಕು.

ಜೋಡಣೆ ಮಾಡದಿದ್ದರೆ, ಅಂತಹವರ ಮಾಸಾಶನವನ್ನು ತಡೆ ಹಿಡಿಯಲಾಗುವುದು ಎಂದು ಸರ್ಕಾರ ನಿನ್ನೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ನೀಡಲಾಗುತ್ತಿರುವ ಉಚಿತ ಆಹಾರ ಧಾನ್ಯಗಳ ವಿತರಣೆಯ ನಂತರ ಅಲ್ಲಿಯೂ ನಕಲಿ ಕಾರ್ಡುಗಳು ಸೃಷ್ಟಿಯಾಗಿದ್ದವು.

ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿಗಳಿಗೆ ಆಧಾರ್ ಕಾರ್ಡ್ ನೋಂದಾಯಿಸಿದ ನಂತರ ಲಕ್ಷಾಂತರ ನಕಲಿ ಕಾರ್ಡುಗಳು ಪತ್ತೆಯಾಗಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಸಾವಿರಾರು ಕೋಟಿ ರೂ. ಉಳಿತಾಯವಾಗುತ್ತದೆ. ಇದೇ ಮಾನದಂಡವನ್ನು ಮಾಸಾಶನಕ್ಕೂ ವಿಸ್ತರಿಸುವ ನಿರ್ಧಾರ ಕೈಗೊಂಡು, ಸರ್ಕಾರ ಆದೇಶ ಹೊರಡಿಸಿದೆ.

Translate »