ದೇಶ ಭಾಷೆಗಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ  ಇರುವುದರಿಂದಲೇ ಹಿಂದಿ ರಾಷ್ಟ್ರ ಭಾಷೆಯಾಯಿತು
ಮೈಸೂರು

ದೇಶ ಭಾಷೆಗಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ  ಇರುವುದರಿಂದಲೇ ಹಿಂದಿ ರಾಷ್ಟ್ರ ಭಾಷೆಯಾಯಿತು

September 20, 2018

ಮೈಸೂರು:  ಭಾರತ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳ ಅನೇಕ ಶಬ್ದಗಳನ್ನು ಒಳಗೊಂಡು ದೇಶ ಭಾಷೆಗ ಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ ಹೊಂದಿರುವ ಕಾರಣಕ್ಕೆ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಪರಿ ಗಣಿಸಲಾಗಿದೆ ಎಂದು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಹೆಚ್.ಎಂ.ಕುಮಾರ ಸ್ವಾಮಿ ಹೇಳಿದರು.
ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ಹಿಂದಿ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದಿ ದಿವಸ್ ಸಮಾ ರಂಭದಲ್ಲಿ ಹಿಂದಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ `ಬದುಕುವ ದಾರಿ’ ಪುಸ್ತಕ ಹಾಗೂ `ಜ್ಞಾನ್‍ಪೀಠ್ ಸೆ ಸಮ್ಮಾನಿತ್ ಕೃಷ್ಣಾ ಸೊಬತಿ’ ಹಿಂದಿ ಭಾಷೆ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದೇಶದ ಎಲ್ಲಾ ಭಾಷೆಗಳ ಜೊತೆಗೆ ಸಮನ್ವಯ ಸಾಧಿಸುವ ಗುಣ ವಿಶೇಷವನ್ನು ಹಿಂದಿ ಭಾಷೆ ಹೊಂದಿದೆ. ಕನ್ನಡ ಸೇರಿದಂತೆ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳ ಶಬ್ದಗಳನ್ನು ಹಿಂದಿ ಭಾಷೆ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಪರಿಗಣಿಸಿದ್ದು, ಆದರೂ ದೇಶದ ಎಲ್ಲಾ ಭಾಷೆಗಳು ರಾಷ್ಟ್ರ ಭಾಷೆ ಎಂದು ಕರೆಯಲು ಅರ್ಹವಾಗಿವೆ ಎಂದು ನುಡಿದರು.

ಅಂದು ಇಂಗ್ಲಿಷರು, ಇಂದು ಇಂಗ್ಲಿಷ್ ಭಾಷೆ: ಸ್ವಾತಂತ್ರ್ಯ ಪೂರ್ವದಲ್ಲಿ ಇಂಗ್ಲಿಷ್‍ನವರ ಅಧೀನದಲ್ಲಿ ಬದುಕಿದ್ದ ನಾವು ಇದೀಗ ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದೇವೆ. ಇಂಗ್ಲಿಷ್ ಭಾಷೆಯು ಮಾರುಕಟ್ಟೆ ಮೌಲ್ಯವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಅದರ ಕಲಿಕೆ ಅಗತ್ಯ. ಆದರೆ ಅತಿಯಾದ ಇಂಗ್ಲಿಷ್ ವ್ಯಾಮೋಹದಲ್ಲಿ ದೇಶ ಭಾಷೆಗಳನ್ನು ನಾವು ಕಡೆಗಣಿಸಿದರೆ ಅಕ್ಷಮ್ಯವಾಗಲಿದೆ. ಹೆಚ್ಚು ಹೆಚ್ಚು ಭಾಷೆ ಗಳನ್ನು ಕಲಿಯುವ ಹವ್ಯಾಸ ಒಳ್ಳೆಯ ಬೆಳವಣಿಗೆ. ಆದರೆ ಇದರಿಂದ ಮಾತೃ ಭಾಷೆ ಅಭಿಮಾನ ಕುಂಠಿತವಾಗಬಾರದು ಎಂದು ನುಡಿದರು.

ಇಂದು ಎರಡು ಮಹತ್ವದ ಕೃತಿಗಳನ್ನು ಬಿಡುಗಡೆ ಮಾಡಿದ್ದು ಸಂತಸ ತಂದಿದೆ. ಅದರಲ್ಲಿ `ಬದುಕು ದಾರಿ’ ಪುಸ್ತಕವು ಹೆಸರೇ ಸೂಚಿಸುವಂತೆ ಬದುಕುವ ಬಗೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ಪುಸ್ತಕವು 49 ಅಧ್ಯಾಯಗಳನ್ನು ಹೊಂದಿದ್ದು, ಬದುಕಿಗೆ ಬೇಕಾದ ಎಲ್ಲಾ ದ್ರವ್ಯಗಳು ಹಾಗೂ ಆದರ್ಶಗಳನ್ನು ಈ ಪುಸ್ತಕದಲ್ಲಿ ಕಂಡುಕೊಳ್ಳಬಹುದು. ಬದುಕಿನ ದಾರಿ ಎಂದರೆ ತಾನೂ ಬದುಕಿ ಇತರರ ಬದು ಕಿಗೂ ಯಾವುದೇ ಅಡ್ಡಿ ಆತಂಕಗಳನ್ನು ಉಂಟು ಮಾಡದೇ ಇರುವುದಾಗಿದೆ. ಇಂತಹ ಸಂದೇಶಗಳನ್ನು ಪುಸ್ತಕ ಗುರುವಿನ ಸ್ಥಾನದಲ್ಲಿ ನಿಂತು ಓದುಗನಿಗೆ ರವಾನಿಸಲಿದೆ ಎಂದರು. ಕಬೀರದಾಸರು ಹಿಂದಿ ಸಾಹಿತ್ಯದಲ್ಲಿ ಮಾನವನ ಬದುಕಿಗೆ ಅಗತ್ಯವಾದ ಸಂದೇಶಗಳನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರೊಬ್ಬ ಗುರು ಆಗಿದ್ದಾರೆ. ಅವರು ತಮ್ಮ ಸಾಹಿತ್ಯದ ಮೂಲಕ ಲೌಕಿಕ ಉದಾಹರಣೆಗಳನ್ನೇ ನೀಡಿದ್ದು, ಯಾವುದೇ ಪವಾಡಗಳ ಬಗ್ಗೆ ಅವರು ನಂಬಿಕೆ ಹೊಂದಿರಲಿಲ್ಲ. `ಗುರು ವಿನ ಗುಲಾಮನಾಗುವ ತನಕ ದೊರೆಯ ದಣ್ಣ ಮುಕ್ತಿ’ ಎಂಬ ಗಾದೆ ಮಾತಿನ ಅರ್ಥವನ್ನು ಸರಿಯಾಗಿ ಗ್ರಹಿಸುವುದು ಮುಖ್ಯ. ಈ ಗಾದೆಯಲ್ಲಿರುವ ಗುಲಾಮ ಎಂಬ ಶಬ್ದದ ಅರ್ಥವನ್ನು ತಪ್ಪಾಗಿ ತಿಳಿ ಯುವ ಅಗತ್ಯವಿಲ್ಲ. ಇಲ್ಲಿನ ಅರ್ಥ ಗುರು ವಿನಲ್ಲಿ ಶಿಷ್ಯ ಗೌರವ ಹೊಂದಿರಬೇಕೆಂಬು ದಾಗಿದೆ ಎಂದು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಹೆಚ್. ಪ್ರಕಾಶ್, ಹಿಂದಿ ವಿಭಾಗದ ಮುಖ್ಯಸ್ಥರೂ ಆದ ಬದುಕುವ ದಾರಿ ಪುಸ್ತಕದ ಕರ್ತೃ ಡಾ.ವಿ.ಸೌಭಾಗ್ಯಲಕ್ಷ್ಮೀ, ವಿಭಾಗದ ಸಹ ಪ್ರಾಧ್ಯಾಪಕರೂ ಆದ `ಜ್ಞಾನ್‍ಪೀಠ್ ಸೆ ಸಮ್ಮಾನಿತ್ ಕೃಷ್ಣಾ ಸೊಬತಿ’ ಪುಸ್ತಕದ ಕರ್ತೃ ಡಾ.ಶಾಲಿವಾಹನ ಬಿ.ಕೊಳ್ಳೂರೆ, ಅಧ್ಯಾಪಕರಾದ ಡಾ.ರತ್ನ, ಪ್ರೊ.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

Translate »