ಬಿಡಿಎ, ಕೆಐಎಡಿಬಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ, 4 ಕೆಜಿ ಚಿನ್ನ, 10 ಕೋಟಿ ನಗದು ಪತ್ತೆ
ಮೈಸೂರು

ಬಿಡಿಎ, ಕೆಐಎಡಿಬಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ, 4 ಕೆಜಿ ಚಿನ್ನ, 10 ಕೋಟಿ ನಗದು ಪತ್ತೆ

October 6, 2018

ಬೆಂಗಳೂರು: ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಶುಕ್ರವಾರ ಕರ್ನಾಟಕ ಕೈಗಾರಿಕಾ ಪ್ರಾದೇಶಾಭಿವೃದ್ಧಿ ಮಂಡಳಿಯ(ಕೆಐಎಡಿಬಿ) ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಮತ್ತು ಬಿಡಿಎ ಚೀಫ್ ಎಂಜಿನಿಯರ್ ಗೌಡಯ್ಯ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಟಿ.ಆರ್. ಸ್ವಾಮಿ ಮತ್ತು ಗೌಡಯ್ಯ ಅವರು ಆದಾಯಕ್ಕೂ ಮೀರಿ ಅಪಾರ ಪ್ರಮಾಣದ ಆಸ್ತಿಗಳಿಸಿದ ಬಗ್ಗೆ ದೂರು ಹಾಗೂ ಮಾಹಿತಿಯನ್ನು ಆಧರಿಸಿ ಎಸಿಬಿ ಅಧಿಕಾರಿಗಳ ತಂಡ ಇಂದು ಇಬ್ಬರ ಕಚೇರಿ ಮನೆ ಸೇರಿದಂತೆ 8 ಕಡೆ ದಾಳಿ ನಡಸಿದ್ದು, 4 ಕೆ.ಜಿ. ಚಿನ್ನ ಹಾಗೂ ಸುಮಾರು 10 ಕೋಟಿ ರೂಪಾಯಿ ನಗದು ಪತ್ತೆ ಮಾಡಿದ್ದಾರೆ. ಎಬಿಸಿ ಅಧಿಕಾರಿಗಳು ಕೌಂಟಿಂಗ್ ಮೆಷಿನ್‍ನಲ್ಲಿ ಹಣ ಲೆಕ್ಕ ಹಾಕುವಷ್ಟು ನಗದು ಸಿಕ್ಕಿದೆ.

ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಗೌಡಯ್ಯ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 4 ಕೆ.ಜಿ.ಚಿನ್ನ ಹಾಗೂ 70 ಲಕ್ಷ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಅಲ್ಲದೆ ತುಮಕೂರಿನಲ್ಲಿರುವ ಗೌಡಯ್ಯ ಅವರ ಸಹೋದರನ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.

ಇನ್ನು ಟಿ.ಆರ್.ಸ್ವಾಮಿ ಅವರಿಗೆ ಸೇರಿರುವ ಮಲ್ಲೇಶ್ವರದ ಮಂತ್ರಿ ಗ್ರೀನ್ಸ್ ಅಪಾರ್ಟ್‍ಮೆಂಟ್‍ನಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಮೂರು ಐಷಾರಾಮಿ ವಾಹನಗಳು, ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಎಸಿಬಿ ಅಧಿಕಾರಿಗಳು ಮನೆಗೆ ಆಗಮಿಸಿದ ವೇಳೆ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದ ಸ್ವಾಮಿ, ಎಷ್ಟು ಬಾರಿ ಬಾಗಿಲು ಬಡಿದರು ತೆರೆಯಲಿಲ್ಲ. ಸ್ವಾಮಿ ಮನೆಯಲ್ಲಿದ್ದ ಹಣವನ್ನು ಬ್ಯಾಗ್‍ನಲ್ಲಿ ತುಂಬಿ ಹೊರಗಡೆ ಬೇರೆಯವರನ್ನು ಕರೆಯಿಸಿಕೊಂಡು ಕಿಟಕಿಯಿಂದ ಬ್ಯಾಗ್ ಅನ್ನು ಹೊರಗೆಸೆದಿದ್ದಾರೆ. ಎಸಿಬಿ ಅಧಿಕಾರಿಗಳು ಆ ಬ್ಯಾಗ್ ಅನ್ನು ಸಹ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Translate »