ಯುವ ಸಂಭ್ರಮ: ಒಂದೆಡೆ ಸಮಾನತೆ ಸಂದೇಶ ಮತ್ತೊಂದೆಡೆ ವಿಶೇಷ ಮಕ್ಕಳ ಪ್ರತಿಭೆ ಅನಾವರಣ
ಮೈಸೂರು

ಯುವ ಸಂಭ್ರಮ: ಒಂದೆಡೆ ಸಮಾನತೆ ಸಂದೇಶ ಮತ್ತೊಂದೆಡೆ ವಿಶೇಷ ಮಕ್ಕಳ ಪ್ರತಿಭೆ ಅನಾವರಣ

October 6, 2018

ಮೈಸೂರು: ಒಂದೆಡೆ ನೈಸರ್ಗಿಕ ವಿಕೋಪ ಕುರಿತು ಪ್ರಕೃತಿಯ ಮುಂದೆ ಎಲ್ಲರೂ ಸಮಾನರು. ಎಲ್ಲರನ್ನು ಪ್ರೀತಿಸಿ, ಎಲ್ಲರ ಜೊತೆ ಜೀವಿಸಿ, ನಾವೆಲ್ಲರು ಒಂದೇ… ಸಂದೇಶ ಸಾರಿದರೆ, ಮತ್ತೊಂದೆಡೆ ನಾವ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ವಿಶೇಷ ಮಕ್ಕಳು ನೃತ್ಯ ರೂಪಕದ ಮೂಲಕ ದೇಶಕ್ಕಾಗಿ ವೀರಮರಣ ಹೊಂದಿದ ಪತಿಯ ಮುಂದೆ ಪತ್ನಿ ಕಣ್ಣೀರಿಡುವಾಗ ಮಗು ತಂದೆಯ ಬಳಿಯಿದ್ದ ಧ್ವಜವನ್ನು ಎತ್ತಿ ಹಿಡಿದು ದೇಶಪ್ರೇಮ ಸಾರಿತು.

ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ 6ನೇ ದಿನವಾದ ಶುಕ್ರವಾರ ಪುಟ್ಟೀರಮ್ಮ ವಾಕ್ ಮತ್ತು ಶ್ರವಣ ಶಾಲೆ ಮಕ್ಕಳು, `ವಂದೇ ಮಾತರಂ. ಸುಜಲಾಂ-ಸುಫಲಾಂ ಮಲೆಯದ ಶೀತಲಾಂ’ ಹಾಡಿಗೆ ಮನೋಜ್ಞವಾಗಿ ನೃತ್ಯ ಪ್ರದರ್ಶಿಸಿ ದೇಶಕ್ಕಾಗಿ ವೀರಮರಣ ಹೊಂದಿದ ಪತಿಯ ಮುಂದೆ

ಪತ್ನಿ ಕಣ್ಣೀರಿಡುವಾಗ ಮಗು ತಂದೆಯ ಬಳಿಯಿದ್ದ ಧ್ವಜವನ್ನು ಎತ್ತಿ ಹಿಡಿದು ದೇಶಪ್ರೇಮ ಸಾರುವ ಜತೆಗೆ ಸಭಿಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚಿಸಿತು. ಈ ವೇಳೆ ಕುವೆಂಪು, ನೇಗಿಲಯೋಗಿ, ವಿಶ್ವೇಶ್ವರಯ್ಯ, ಡಾ.ರಾಜ್‍ಕುಮಾರ್, ಕಿತ್ತೂರುರಾಣಿ ಚೆನ್ನಮ್ಮ, ಕನಕದಾಸರ ಭಾವಚಿತ್ರಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ನಿರೀಕ್ಷೆ ವಿಶೇಷ ಶಾಲೆಯ ಮಕ್ಕಳು, ನೃತ್ಯ ರೂಪಕವನ್ನು ಪ್ರಸ್ತುತಪಡಿಸಿ ವಿಶೇಷ ಮಕ್ಕಳು ನಾವು-ದೇವರ ಮಕ್ಕಳು ನಾವು. ನಮಗೆ ಬೇಕಿರುವುದು ಕರುಣೆಯಲ್ಲ ಕಾಳಜಿ. ನಮಗೆ ಕೊಟ್ಟಿರುವ ಸೌಲಭ್ಯವನ್ನು ಕಸಿದುಕೊಳ್ಳಬೇಡಿ ಎಂಬ ಸಂದೇಶಗಳನ್ನು ಸಾರಿದರು.

ನಿರೀಕ್ಷೆ ಶಾಲೆಗೆ 25 ಸಾವಿರ ರೂ: ಬೆಂಗಳೂರಿನ ನಾಗರಾಜ್ ಜಮಖಂಡಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಿರೀಕ್ಷೆ ಶಾಲೆಗೆ 25 ಸಾವಿರ ರೂ. ದೇಣಿಗೆ ನೀಡಿದರು.ಚಾಮರಾಜನಗರ ಜೆಎಸ್‍ಎಸ್ ಮಹಿಳಾ ಕಾಲೇಜು ಮತ್ತು ವಿಜಯ ವಿಠಲ ಕಾಂಪೋಸಿಟ್ ಪಿಯು ಕಾಲೇಜು ವಿದ್ಯಾರ್ಥಿಗಳು, ಕನ್ನಡ ಮತ್ತು ಸಂಸ್ಕೃತಿ ಕುರಿತ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, ಚೆಲ್ಲಿದರು ಮಲ್ಲಿಗೇಯ ಬಾಣಾಸು ಏರಿಮ್ಯಾಲೆ’, ಭಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ’, `ಕರುನಾಡೆ ಕೈ ಚಾಚಿದೆ ನೋಡೆ’ ಹಾಡಿಗೆ ನೃತ್ಯದ ಮೂಲಕ ಕನ್ನಡ-ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ಮಂಡ್ಯದ ಶಂಕರೇಗೌಡ ಕಾಲೇಜು ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಕೊಡಗು-ಕೇರಳದಲ್ಲಿ ಉಂಟಾದ ನೈಸರ್ಗಿಕ ವಿಕೋಪ ಕುರಿತು ನೃತ್ಯದ ಮೂಲಕ ಪ್ರಸ್ತುತಪಡಿಸಿ, ಪ್ರಕೃತಿಯ ಮುಂದೆ ಎಲ್ಲರೂ ಸಮಾನರು. ಎಲ್ಲರನ್ನು ಪ್ರೀತಿಸಿ, ಎಲ್ಲರ ಜೊತೆ ಜೀವಿಸಿ, ನಾವೆಲ್ಲರು ಒಂದೇ ಎಂಬ ಸಂದೇಶ ಸಾರಿದರು.

ಗುಂಡ್ಲುಪೇಟೆ ಗೌತಮ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ, ಹಾಸನ ಎವಿಕೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಮಹಿಳಾ ಸಬಲೀಕರಣಕ್ಕೆ ಎಲ್ಲರೂ ಕೈ ಜೋಡಿಸಿ ಎಂಬ ಸಂದೇಶ ಸಾರಿದರು.

ಹುಣಸೂರು ಜ್ಞಾನಧಾರ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಭಾವೈಕ್ಯತೆ, ಒಂಟಿಕೊಪ್ಪಲು ಸರ್ಕಾರಿ ಪಿಯು ಕಾಲೇಜು ಜಾನಪದ ಕಲೆ, ಸಪ್ತಗಿರಿ ಪಿಯು ಕಾಲೇಜು ಪರಿಸರ ಸಂರಕ್ಷಣೆ ಕುರಿತು ನೃತ್ಯ ಪ್ರದರ್ಶಿಸಿದರು.

Translate »