ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಯಾವುದೇ ಕ್ಷಣದಲ್ಲಿ ಆದೇಶ ಹೊರಬೀಳುವ ಸಾಧ್ಯತೆ
ಮೈಸೂರು

ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಯಾವುದೇ ಕ್ಷಣದಲ್ಲಿ ಆದೇಶ ಹೊರಬೀಳುವ ಸಾಧ್ಯತೆ

October 6, 2018

ಬೆಂಗಳೂರು: ಕೃಷ್ಣ ರಾಜಸಾಗರ ಅಣೆಕಟ್ಟೆಯಿಂದ ಹರಿಯುವ ಭಾರೀ ಪ್ರಮಾಣದ ನೀರನ್ನು ಸಂಗ್ರಹಿಸಲು ಮೇಕೆದಾಟು ಸಮೀಪ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿ ದಂತೆ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಯಾವುದೇ ಕ್ಷಣದಲ್ಲಿ ಅನುಮತಿ ಆದೇಶ ಹೊರಡಿಸಲಿದ್ದು, ಸಮಾನಾಂತರ ಅಣೆ ಕಟ್ಟು ನಿರ್ಮಾಣ ಬೇಡಿಕೆ 35 ವರ್ಷಗಳ ನಂತರ ಕೊನೆಗೂ ಈಡೇರುತ್ತಿದೆ. ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ, ದೆಹಲಿಯಲ್ಲಿಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ ಸಂದರ್ಭದಲ್ಲಿ ಕರ್ನಾಟಕ ಮತ್ತು ತಮಿಳುನಾಡಿಗೆ ಬಹುಪಯೋಗಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡುವ ಭರವಸೆ ನೀಡಿದ್ದಾರೆ.

ಭೇಟಿ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುಖ್ಯ ಮಂತ್ರಿ ಅವರು, ರಾಜ್ಯದ ಬಹುದಿನಗಳ ಕನಸು ನನಸಾಗುವ ಹಂತದಲ್ಲಿದೆ. ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಸ್ಥಳದ ಲ್ಲಿಯೇ ತಮ್ಮ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಮುಂದಿನ ಒಂದು ವಾರದಲ್ಲಿ ಜಲ ಸಂಪನ್ಮೂಲ ಇಲಾಖೆಯ ಅನುಮತಿ ಪತ್ರ ದಕ್ಕಲಿದೆ ಎಂದರು. ಪತ್ರ ದೊರೆತರೂ ಮುಂದೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಒಪ್ಪಿಗೆ ದೊರೆಯ ಬೇಕಿದೆ. ಹೀಗಾಗಿ ತಕ್ಷಣವೇ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಮಾಡಿದ ಮನವಿಗೆ ಸ್ಥಳದಲ್ಲಿಯೇ ಸ್ಪಂದಿಸಿದ್ದಕ್ಕೆ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದರು.

ಪ್ರಸಕ್ತ ವರ್ಷ ಕೇರಳ ಮತ್ತು ಕೊಡಗಿನ ಮಲೆನಾಡು ಪ್ರದೇಶದಲ್ಲಿ ಬಿದ್ದ ಭಾರೀ ಮಳೆಯಿಂದ ಕಾವೇರಿ ನದಿ ಪಾತ್ರದ ಎಲ್ಲಾ ಜಲಾಶಯಗಳು ಅವಧಿಗೂ ಮುನ್ನವೇ ಭರ್ತಿಯಾಗಿ ಸಮುದ್ರಕ್ಕೆ 200ಕ್ಕೂ ಹೆಚ್ಚು ಟಿಎಂಸಿ ನೀರು ಹರಿದುಹೋಗಿದೆ.
ತಮಿಳುನಾಡು, ತನಗೆ ಬೇಕಾದಷ್ಟು ನೀರನ್ನು ಹಿಡಿದು ಹೆಚ್ಚುವರಿ ನೀರನ್ನು ಶೇಖರಿಸಲಾಗದೆ ಸಮುದ್ರಕ್ಕೆ ಹರಿಸಿದೆ. ಪ್ರಸಕ್ತ ವರ್ಷ ತಮಿಳುನಾಡಿಗೆ 349 ಟಿಎಂಸಿ ನೀರು ಹರಿದಿದೆ, ಅದರಲ್ಲಿ ಅವರು ಬಳಕೆ ಮಾಡಿಕೊಂಡಿರುವುದು ಕೇವಲ 140 ಟಿಎಂಸಿ ಮಾತ್ರ, ಉಳಿದ 209 ಟಿಎಂಸಿ ಸಮುದ್ರದ ಪಾಲಾಗಿದೆ.

ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ತಮಿಳುನಾಡಿಗೆ ವಾರ್ಷಿಕ 177.5 ಟಿಎಂಸಿ ನೀರು ಹರಿಸಬೇಕು, ಆದರೆ ಕಳೆದ ಸೆಪ್ಟೆಂಬರ್ ಅಂತ್ಯದ ವೇಳೆಗಾಗಲೇ ದೊಡ್ಡ ಪ್ರಮಾಣದಲ್ಲಿ ನೀರು ಹರಿದುಹೋಗಿದೆ. ಇನ್ನೂ ಎರಡು ತಿಂಗಳ ಕಾಲ ಮಳೆಗಾಲವಿದೆ. ಆ ಭಾಗದಲ್ಲಿ ಬೀಳುತ್ತಿರುವ ಮಳೆ ಗಮನಿಸಿದರೆ ತಮಿಳುನಾಡಿಗೆ ಇನ್ನೂ ಭಾರೀ ಪ್ರಮಾಣದ ನೀರು ಹರಿಯಲಿದೆ ಎಂಬ ಅಂಕಿ-ಅಂಶ ಮತ್ತು ದಾಖಲೆಗಳನ್ನು ಗಡ್ಕರಿ ಅವರ ಗಮನಕ್ಕೆ ತರಲಾಗಿದೆ. ಒಂದು ವೇಳೆ ಮೇಕೆದಾಟು ಜಲಾಶಯ ನಿರ್ಮಾಣವಾಗಿದ್ದರೆ ಈ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೇ ಹರಿಸುತ್ತಿದ್ದೆವು. ಎಲ್ಲಾ ವರ್ಷದಲ್ಲಿ ಮುಂಗಾರು ಇದೇ ರೀತಿ ಇರುವುದಿಲ್ಲ, ಇಂತಹ ಸಂದರ್ಭದಲ್ಲಿ ಸಮುದ್ರದ ಪಾಲಾಗುವ ನೀರನ್ನು ಹಿಡಿದಿಟ್ಟಿದ್ದರೆ, ಮುಂದೆ ಕಷ್ಟ ಕಾಲದಲ್ಲಿ ಬಳಕೆ ಮಾಡಿಕೊಳ್ಳಬಹುದಿತ್ತು.

ಜಲಾಶಯ ನಿರ್ಮಾಣವಾಗುವ ಕೆಳಭಾಗದಲ್ಲಿ ನಮಗೆ ಯಾವುದೇ ಕೃಷಿ ಚಟುವಟಿಕೆಯ ಭೂಮಿ ಇರುವುದಿಲ್ಲ, ಅದನ್ನು ತಮಿಳುನಾಡು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಬೆಂಗಳೂರು ಸೇರಿದಂತೆ ಮೇಕೆದಾಟು ವ್ಯಾಪ್ತಿಗೆ ಬರುವ ಕೆಲವು ನಗರ-ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವುದು ಹಾಗೂ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುತ್ತೇವೆ. ಜಲಾಶಯದಲ್ಲಿ ಸಂಗ್ರಹವಾಗುವ ಎಲ್ಲಾ ನೀರು ತಮಿಳುನಾಡಿಗೇ ಮೀಸಲು, ಈ ವರ್ಷದ ಪರಿಸ್ಥಿತಿ ಅರ್ಥ ಮಾಡಿಕೊಂಡು ನಮಗೆ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡುವಂತೆ ಮಾಡಿದ ಮನವಿಗೆ ಗಡ್ಕರಿ ಅವರು ಸ್ಥಳದಲ್ಲೇ ಹಸಿರು ನಿಶಾನೆ ತೋರಿದರು. ನಿನ್ನೆಯಷ್ಟೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೂ ಗಡ್ಕರಿ ಅವರನ್ನು ಭೇಟಿ ಮಾಡಿ ಸಮಾನಾಂತರ ಅಣೆಕಟ್ಟು ನಿರ್ಮಾಣದಿಂದ ಎರಡೂ ರಾಜ್ಯಗಳಿಗೆ ಆಗುವ ಉಪಯುಕ್ತತೆ ಬಗ್ಗೆ ಮನದಟ್ಟು ಮಾಡಿದ್ದು, ನಮಗೆ ಅನುಕೂಲವಾಯಿತು ಎಂದರು.

Translate »