ಸಚಿವರ ಮನವೊಲಿಕೆ ಯತ್ನ ವಿಫಲ
ಮೈಸೂರು

ಸಚಿವರ ಮನವೊಲಿಕೆ ಯತ್ನ ವಿಫಲ

October 6, 2018

ಮೈಸೂರು:  ಖಾಯಂ ಮಾಡಬೇಕು. ಬೆಳಗಿನ ಉಪಾಹಾರಕ್ಕೆ ಹಣ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೂರು ದಿನದಿಂದ ಮೈಸೂರು ಮಹಾನಗರಪಾಲಿಕೆ ಎದುರು ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುತ್ತಿರುವ ಪೌರ ಕಾರ್ಮಿಕರ ಮನವೊಲಿಸುವ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಪ್ರವಾಸೋದ್ಯಮ ಸಚಿವರ ಯತ್ನ ವಿಫಲವಾಯಿತು. ಹೀಗಾಗಿ ತಮ್ಮ ಬೇಡಿಕೆ ಈಡೇರದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ಮುಷ್ಕರ ನಿರತರು ಪ್ರತಿಭಟನೆ ಮುಂದುವರಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಕೈಗೊಂಡಿರುವ ತೀರ್ಮಾನವನ್ನು ಜಾರಿಗೊಳಿಸುವ ಜತೆಗೆ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಅಥವಾ ಹಣ ಪಾವತಿ ಮಾಡುವುದು ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ದಸರಾ ಸಂದರ್ಭದಲ್ಲಿ ಮುಷ್ಕರ ಅಧಿ ಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಮೊದಲ ದಿನವೇ ಅಧಿಕಾರಿಗಳು ಭೇಟಿ ನೀಡಿ ಮುಷ್ಕರ ಕೈಬಿಡುವಂತೆ ಮನವೊಲಿಸಲು ಮುಂದಾಗಿ ಪೌರ ಕಾರ್ಮಿಕರ ಆಕ್ರೋಶಕ್ಕೆ ಒಳಗಾಗಿದ್ದರು. ದಸರಾ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮುಷ್ಕರ ಮುಂದುವರಿದರೆ ಮೈಸೂರಿನ ನೈರ್ಮಲ್ಯ, ಪರಿಸರ ಹಾಳಾಗುವುದನ್ನು ಅರಿತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸು ವಲ್ಲಿ ನಡೆಸಿದ ಪ್ರಯತ್ನ ವಿಫಲವಾಯಿತು.

ನಾಳೆ (ಅ.6) ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೌರ ಕಾರ್ಮಿಕರ ಸಂಘದ ಮುಖಂಡರೊಂದಿಗೆ ಸಭೆ ನಡೆಸಿ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವುದು. ದಸರಾ ಹಿನ್ನೆಲೆಯಲ್ಲಿ ಪ್ರತಿಭಟನೆ ಬೇಡ. ನಾವೂ ನಿಮ್ಮೊಂದಿಗಿದ್ದೇವೆ. ಪ್ರತಿಭಟನೆಯನ್ನು ಕೈಬಿಡುವಂತೆ ಸಚಿವದ್ವಯರು ಮನವಿ ಮಾಡಿದರು. ಆದರೆ ನಮಗೆ ಬರೀ ಆಶ್ವಾಸನೆ ಬೇಡ. ಆದೇಶ ಬೇಕು. ಹಾಗಾಗಿ ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು.

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಅಧ್ಯಕ್ಷ ಎಂ.ನಾರಾಯಣ್, ಎನ್.ಮಾರ ಸೇರಿದಂತೆ ಇನ್ನಿತರ ಪದಾಧಿ ಕಾರಿಗಳೊಡನೆ ಸಮಾಲೋಚನೆ ನಡೆಸಿದ ಸಚಿವರು, ಬೇಡಿಕೆಗಳನ್ನು ನಗರಾಭಿವೃದ್ಧಿ ಸಚಿವರು, ಮುಖ್ಯಮಂತ್ರಿಗಳೂ ದಸರಾ ಮಹೋತ್ಸವದ ಬಳಿಕ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ. ಸರ್ಕಾರ ನಿಮ್ಮ ಬೇಡಿಕೆ ಈಡೇರಿಸಲು ಬದ್ಧವಾಗಿದೆ. ಮುಷ್ಕರ ಕೈಬಿಟ್ಟು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಎಂದು ಕೋರಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಕೂಡಲೇ ಈ ಬಗ್ಗೆ ಆದೇಶ ಹೊರಡಿಸದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹಠಕ್ಕೆ ಬಿದ್ದರು. ಇದರಿಂದಾಗಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಾಸಕ ಎಲ್.ನಾಗೇಂದ್ರ ನಡೆಸಿದ ಮಾತುಕತೆ ವಿಫಲವಾಯಿತು. ಆಗ ಸಚಿವರು ನಾಳೆ ನಿಮ್ಮ ಬೇಡಿಕೆ ಈಡೇರಿಸುವ ಕುರಿತು ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿ ಅಲ್ಲಿಂದ ಹೊರಟರು.

ಬಳಿಕ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ನಾರಾಯಣ್ ಅವರು, ನ್ಯಾಯಯುತ ಬೇಡಿಕೆಗಳು ಈಡೇರುವ ತನಕ ಹಾಗೂ ಶನಿವಾರದ ಸಭೆಯವರೆಗೆ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು. ಪ್ರತಿಭಟನೆಯಲ್ಲಿ ಪ್ರತಿಭಟನೆಯಲ್ಲಿ ರಾಜ್ಯ ವರಿಷ್ಠ ಮಂಡಳಿಯ ಎನ್.ಮಾರ, ರಾಜ್ಯ ಉಪಾಧ್ಯಕ್ಷ ಆರ್.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಎನ್.ನರಸಿಂಹ, ಶ್ರೀನಿವಾಸ, ಮಂಚಯ್ಯ, ದಾಸ್, ವಸಂತಾ ಇನ್ನಿತರರು ಭಾಗವಹಿಸಿದ್ದಾರೆ.

Translate »