ಮೈಸೂರು ವಿವಿ, ಮುಕ್ತ ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ
ಮೈಸೂರು

ಮೈಸೂರು ವಿವಿ, ಮುಕ್ತ ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ

October 25, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಹಾಗೂ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ಶೀಘ್ರವೇ ಕ್ರಮ ವಹಿಸುವುದಾಗಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಭರವಸೆ ನೀಡಿದರು.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡ ಳಿತದ ವತಿಯಿಂದ ಬುಧವಾರ ಹಮ್ಮಿ ಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಚಿತ್ರಪಟಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ನಿಮ್ಮ ಬೇಡಿಕೆಯಂತೆ ಅಧ್ಯಯನ ಪೀಠ ಸ್ಥಾಪನೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಮೈಸೂರಿನ ಮಿನಿವಿಧಾನಸೌಧದ ಬಳಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಗೂ ನಗರ ಪಾಲಿಕೆಯೊಂದಿಗೆ ವ್ಯವಹರಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ನಾಯಕ ಸಮಾಜದಲ್ಲಿ ಜನಿಸಿದ ವಾಲ್ಮೀಕಿ ಯವರು ಮಹಾಕಾವ್ಯ `ರಾಮಾಯಣ’ ರಚಿಸುವ ಮೂಲಕ ನಾಯಕ ಸಮುದಾಯಕ್ಕೊಂದು ಘನತೆ ತಂದುಕೊಟ್ಟಿದ್ದಾರೆ. ವಾಲ್ಮೀಕಿಯವರ ಜೊತೆಗೆ ಮದಕರಿ ನಾಯಕ ಸೇರಿದಂತೆ ಸಮುದಾಯದ ಅನೇಕರು ತಮ್ಮ ಛಾಪು ಮೂಡಿಸಿದ್ದಾರೆ ಎಂದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭಿಮಾನದಿಂದ ಗೆಲ್ಲಿಸಿದ್ದೀರಿ, ಇದನ್ನು ಜೀವನದಲ್ಲಿ ಎಂದಿಗೂ ಮರೆಯಲಾಗದು. ಇಂದು ಚುನಾವಣಾ ಪ್ರಚಾರದ ಹಿನ್ನೆಲೆ ಯಲ್ಲಿ ನಾನು ಶಿವಮೊಗ್ಗಕ್ಕೆ ತೆರಳುವ ಕಾರ್ಯಕ್ರಮ ಇತ್ತು. ಆದರೆ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸುವುದಕ್ಕಾಗಿ ಅದನ್ನು ರದ್ದು ಮಾಡಿಕೊಂಡಿದ್ದೇನೆ ಎಂದು ನುಡಿದರು.

ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರಿಡಿ: ಮುಖ್ಯ ಭಾಷಣ ಮಾಡಿದ ಮುಕ್ತ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ, ವಾಲ್ಮೀಕಿಯವರು ಜಗತ್ತಿನ ಶ್ರೇಷ್ಠ ಕವಿ. ರಾಮಾಯಣದಂತಹ ಮಹಾ ಕಾವ್ಯ, ವಾಲ್ಮೀಕಿಯಂತಹ ಮಹಾಕವಿ ಸಿಕ್ಕಿದ್ದು ಈ ಭುವನದ ಭಾಗ್ಯ ಎಂದು ಕುವೆಂಪು ಸ್ಮರಿಸಿದ್ದಾರೆ. ಮೊಟ್ಟ ಮೊದಲು ಸಂಸ್ಕೃತದಲ್ಲಿ ಮಹಾಕಾವ್ಯ ರಚನೆ ಮಾಡಿದ್ದ ಶ್ರೇಯಸ್ಸು ವಾಲ್ಮೀಕಿಯವರಿಗೆ ಸಲ್ಲುತ್ತದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಉನ್ನತೀ ಕರಣಗೊಳ್ಳಲಿದ್ದು, ಈ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರಿಡಬೇಕೆಂದು ವೇದಿಕೆಯಲ್ಲಿದ್ದ ಸಚಿವ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹರಲ್ಲಿ ಮನವಿ ಮಾಡಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಹುಟ್ಟಿನಿಂದ ಯಾರೂ ಶ್ರೇಷ್ಠರಾಗಲು ಸಾಧ್ಯವಿಲ್ಲ. ನಾವು ಅಳವಡಿಸಿಕೊಳ್ಳುವ ಸಂಸ್ಕಾರದಿಂದ ಮಾತ್ರ ಶ್ರೇಷ್ಠರಾಗಲು ಸಾಧ್ಯ. ಅದೇ ರೀತಿ ವಾಲ್ಮೀಕಿಯವರು ತಾವು ಬೆಳೆಸಿ ಕೊಂಡ ಸಂಸ್ಕಾರದಿಂದ ಸಂಸ್ಕೃತದ ಮೊದಲ ಮಹಾಕಾವ್ಯ `ರಾಮಾಯಣ’ ಬರೆದು ಶಾಶ್ವತ ವಾಗಿ ನಮ್ಮ ಮನಸ್ಸಿನಲ್ಲಿ ಉಳಿದು ಕೊಂಡಿದ್ದಾರೆ ಎಂದು ಸ್ಮರಿಸಿದರು.

ನಾಯಕ ಜನಾಂಗವೆಂದರೆ ಮದಕರಿ ನಾಯಕ ನೆನಪಾಗುತ್ತಾರೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ 200 ವರ್ಷಗಳ ಕಾಲ ಎಲ್ಲರ ಆಕ್ರಮಣ ಮೆಟ್ಟಿ ದುರ್ಗವನ್ನಾಳಿದ ಮದಕರಿ ನಾಯಕರ ವೀರಾವೇಷದ ಗುಣ ನಿಮ್ಮ ರಕ್ತದಲ್ಲಿದೆ. ಆದರೆ ಮದಕರಿ ನಾಯಕರನ್ನು ಮೋಸದಿಂದ ಕೊಲ್ಲಲಾಯಿತು ಎಂದು ವಿಷಾದ ವ್ಯಕ್ತಪ ಡಿಸಿದ ಅವರು, ಪರಿವಾರ ಮತ್ತು ತಳವಾರ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಲುವಾಗಿ ಗೆಜೆಟ್ ನೋಟಿಫಿ ಕೇಶನ್ ಹೊರಡಿಸುವ ಗುರುತರವಾದ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಖಂಡಿತ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹಕ್ಕೊತ್ತಾಯ: ಸಮಾರಂಭದ ಆರಂಭಕ್ಕೂ ಮುನ್ನ ನಾಯಕ ಯುವ ಸೇನೆ ರಾಜ್ಯಾ ಧ್ಯಕ್ಷ ದೇವರಾಜ್ ಟಿ.ಕಾಟೂರು, ನಾಯಕ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಜನಪ್ರತಿನಿಧಿಗಳ ಮುಂದೆ ಮಂಡಿಸಿದರು. ಪರಿಶಿಷ್ಟ ಪಂಗಡದವರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ತೊಂದರೆ ನೀಡುತ್ತಿದ್ದು, ಇದರಿಂದ ಹಲವು ಮಂದಿ ಸರ್ಕಾರಿ ಕೆಲಸದಿಂದ ವಂಚಿತ ರಾಗುತ್ತಿದ್ದಾರೆ. ಈ ಸಮಸ್ಯೆ ಪರಿ ಹರಿಸಬೇಕು ಎಂಬಿತ್ಯಾದಿ ಹಕ್ಕೊತ್ತಾಯ ಗಳನ್ನು ಮಾಡಲಾಯಿತು.

ಮಿನಿ ವಿಧಾನಸೌಧದ ಬಳಿ ವಾಲ್ಮೀಕಿ ಪುತ್ಥಳಿ ನಿರ್ಮಾಣ, ಮೈಸೂರು ವಿವಿ ಮತ್ತು ಮುಕ್ತ ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆ, ಪರಿಶಿಷ್ಟ ಪಂಗಡಕ್ಕೆ ಕೇಂದ್ರ ಸರ್ಕಾರದಂತೆ 7.5ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರವೂ ನೀಡಬೇಕು, ಮದಕರಿ ನಾಯಕ ಸಮಾಧಿ ಮತ್ತು ಚಿತ್ರದುರ್ಗ ಕೋಟೆ ಅಭಿವೃದ್ಧಿಗೊಳಿಸಬೇಕು, ದಾವಣ ಗೆರೆಯ ವಾಲ್ಮೀಕಿ ಮಠಕ್ಕೆ 50 ಕೋಟಿ ರೂ. ಧನ ಸಹಾಯ ನೀಡಬೇಕು, ಮೈಸೂರು ಮೇಯರ್ ಸ್ಥಾನವನ್ನು ಪರಿಶಿಷ್ಟ ವರ್ಗಕ್ಕೆ ಮೀಸಲಿರಿಸಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಜನಪ್ರತಿನಿಧಿಗಳ ಮುಂದಿಡಲಾಯಿತು.

ಶಾಸಕ ನಾಗೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಸಿಇಓ ಜ್ಯೋತಿ, ಮುಡಾ ಆಯುಕ್ತ ಕಾಂತರಾಜು, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಮೈಸೂರು ತಹಸೀಲ್ದಾರ್ ಟಿ.ರಮೇಶ್ ಬಾಬು, ವಾಲ್ಮೀಕಿ ಜಯಂತೋತ್ಸವ ಸಮಿತಿ ಗೌರವಾಧ್ಯಕ್ಷ ಶಂಭುಲಿಂಗಯ್ಯ, ಅಧ್ಯಕ್ಷ ಕೆಂಪನಾಯಕ, ನಗರಪಾಲಿಕೆ ಸದಸ್ಯರಾದ ಶೋಭಾ ಸುನಿಲ್, ಲೋಕೇಶ್ ಮತ್ತಿತರರು ಹಾಜರಿದ್ದರು.

Translate »