ಮೈಸೂರು: ಬಹಳ ವರ್ಷಗಳಿಂದ ಎದುರಾಳಿಯಾಗಿ ಹೋರಾಟ ಮಾಡಿಕೊಂಡು ಬಂದು, ಈಗ ಏಕಾಏಕಿ ಜೊತೆಯಲ್ಲಿ ಕೆಲಸ ಮಾಡಲು ಇರಿಸು ಮುರಿಸು ಉಂಟಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಉಪ ಚುನಾವಣಾ ಪ್ರಚಾರ ಕೈಗೊಳ್ಳುವ ಸಲುವಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಭಿನ್ನಮತದ ಬಗ್ಗೆ ತಿಳಿಸಿದರು.
ಬಿಜೆಪಿಯವರೇ ಅಸ್ಥಿರರಾಗುತ್ತಿದ್ದಾರೆ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯವರೇ ಅಸ್ಥಿರರಾಗುತ್ತಿದ್ದಾರೆ. ಎಲ್ಲಾ ಐದು ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದರು.
ವಿದೇಶಕ್ಕೆ ಹೋಗಿದ್ದ ಮಂಡ್ಯದ ಕಾಂಗ್ರೆಸ್ ನಾಯಕರೆಲ್ಲರೂ ಇದೀಗ ಜೆಡಿಎಸ್ ಪರ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ನಮ್ಮ ಎದುರಾಳಿ ಬಿಜೆಪಿ ಆಗಿರುವುದರಿಂದ ನಾವು ಕೆಲಸ ಮಾಡಲೇಬೇಕಾಗಿದೆ. ಹಾಗಾಗಿ ನಾನೂ ಕೂಡ ಮಂಡ್ಯದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದೇನೆ ಎಂದರು.
ಮೇಯರ್ ನಮಗೇ ಬೇಕು: ಮೈಸೂರು ಮಹಾನಗರ ಪಾಲಿಕೆಯಲ್ಲಿ ನಮಗೆ (ಕಾಂಗ್ರೆಸ್) ಮೇಯರ್ ಸ್ಥಾನ ಬೇಕು ಎಂದು ಹೇಳಿದ ಅವರು, ಪಾಲಿಕೆಯಲ್ಲಿ ನಾವೇ ಹೆಚ್ಚು ಸಂಖ್ಯೆಯಲ್ಲಿ ಗೆದ್ದಿರುವುದರಿಂದಾಗಿ ನಾವು ಮೇಯರ್ ಸ್ಥಾನ ಕೇಳುತ್ತಿದ್ದೇವೆ. ಒಟ್ಟಿನಲ್ಲಿ ನಮಗೆ ಮೇಯರ್ ಸ್ಥಾನ ಬೇಕು ಎಂದು ಹೇಳುವ ಮೂಲಕ ಮೇಯರ್ ಆಕಾಂಕ್ಷಿ ಜೆಡಿಎಸ್‍ಗೆ ಶಾಕ್ ನೀಡಿದರು. ಎಪಿಎಂಸಿ ಅಧ್ಯಕ್ಷರ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರ ನನಗೆ ಗೊತ್ತಿಲ್ಲ ಎಂದರು.