ಆಸ್ಪತ್ರೆಯಿಂದ ನಟ ದರ್ಶನ್ ಬಿಡುಗಡೆ
ಮೈಸೂರು

ಆಸ್ಪತ್ರೆಯಿಂದ ನಟ ದರ್ಶನ್ ಬಿಡುಗಡೆ

September 30, 2018

ಮೈಸೂರು: ಕಾರು ಅಪಘಾತದಲ್ಲಿ ಗಾಯ ಗೊಂಡು ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ನಟ ದರ್ಶನ್ ಇಂದು ಮಧ್ಯಾಹ್ನ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಬಿಡುಗಡೆಯಾದರು.

ಮಧ್ಯಾಹ್ನ 3.45 ಗಂಟೆ ವೇಳೆಗೆ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆಯೇ ಎದುರಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದರ್ಶನ್, ಊಟ ಮಾಡಿ ಬರುತ್ತಿದ್ದಾಗ ರಿಂಗ್ ರಸ್ತೆ ತಿರುವಿನಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು ಎಂದರು.

ನಾನೂ ಸೇರಿದಂತೆ ನಾಲ್ವರಿಗೆ ಗಾಯಗಳಾಗಿತ್ತು. ನನ್ನ ಕಾರಿನಲ್ಲಿ ಐವರು ಕೂರಲು ಅವಕಾಶವಿದೆ. ನಾವು ಐವರಷ್ಟೇ ಕಾರಿನಲ್ಲಿದ್ದೆವು, ನನ್ನ ಸ್ನೇಹಿತ ಚಾಲನೆ ಮಾಡುತ್ತಿದ್ದರು. ಈಗ ಎಲ್ಲರೂ ಆರಾಮಾಗಿದ್ದೇವೆ ಎಂದರು.ಅಪಘಾತವಾದ ಸ್ಥಳದಲ್ಲಿನ ವಿದ್ಯುತ್ ಕಂಬ ಮೊದಲೇ ಮುರಿದು ಬಿದ್ದಿತ್ತು. ಸ್ಥಳ ನೋಡಿದರೆ ನಿಮಗೆ ಅಪಘಾತ ಹೇಗಾಗಿದೆ ಎಂಬುದು ತಿಳಿಯುತ್ತದೆ. ಕಾರು ಬಂದು ಡಿಕ್ಕಿ ಹೊಡೆದರೆ ಕಂಬ ದಕ್ಷಿಣ ಭಾಗಕ್ಕೆ ಬೀಳಬೇಕಿತ್ತು. ಆದರೆ ಅದು ಉತ್ತರ ದಿಕ್ಕಿಗೆ ಮುರಿದು ಬಿದ್ದಿದೆ ಎಂದ ಅವರು, ಕಂಬ ಮೊದಲೇ ಬಿದ್ದಿತ್ತು ಎಂದು ದರ್ಶನ್ ಸ್ಪಷ್ಟಪಡಿಸಿದರು.

ಸಾಮಾನ್ಯವಾಗಿ ಅಪಘಾತವಾದ ವಾಹನವನ್ನು ತಕ್ಷಣವೇ ತೆರವುಗೊಳಿಸಬೇಕು, ಇಲ್ಲದಿದ್ದರೆ ಮತ್ತಷ್ಟು ಅಪಘಾತಗಳು ಸಂಭವಿಸುತ್ತವೆಯಾದ್ದರಿಂದ ನಾವು ಕಾರನ್ನು ತೆರವುಗೊಳಿಸಿ ದೆವೆಯೇ ಹೊರತು ಬಚ್ಚಿಟ್ಟಿರಲಿಲ್ಲ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕಳೆದ 6 ದಿನಗಳ ಹಿಂದೆ ಹೆಬ್ಬಾಳಿನ ಸಿಪೆಟ್ ಸಮೀಪ ಜೆಎಸ್‍ಎಸ್ ಅರ್ಬನ್ ಹಾತ್ ಎದುರು ರಿಂಗ್ ರಸ್ತೆ ತಿರುವಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ನಟರಾದ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಮತ್ತು ಆಂಟನಿ ರಾಯ್ ಅವರು ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಎಲ್ಲರೂ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

Translate »