ಮೈಸೂರಿಗೆ ಸರಬರಾಜಾಗುತ್ತಿರುವ ನೀರಿನ ಆಡಿಟ್‍ಗೆ ಶಾಸಕ ರಾಮದಾಸ್ ಆಗ್ರಹ
ಮೈಸೂರು

ಮೈಸೂರಿಗೆ ಸರಬರಾಜಾಗುತ್ತಿರುವ ನೀರಿನ ಆಡಿಟ್‍ಗೆ ಶಾಸಕ ರಾಮದಾಸ್ ಆಗ್ರಹ

September 30, 2018

ಮೈಸೂರು: ಮೈಸೂರು ನಗರಕ್ಕೆ ವಿವಿಧೆಡೆಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರು ಹಂಚಿಕೆಯಲ್ಲಿ ಹಗರಣ ನಡೆಯುತ್ತಿದ್ದು, ಕೂಡಲೇ ವಾಟರ್ ಸರಬರಾಜು ವಿಚಾರದಲ್ಲಿ ಆಡಿಟ್ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಮೈಸೂರಿಗೆ ಕುಡಿಯುವ ನೀರು ಪೂರೈಸುವ ಮೇಳಾಪುರದ ಕಾವೇರಿ ನದಿಯಿಂದ ನೀರೆತ್ತುವ ಕೇಂದ್ರ, ದೇವನೂರು, ರಮ್ಮನಹಳ್ಳಿಯಲ್ಲಿರುವ ನೀರು ಶುದ್ದೀಕರಣ ಘಟಕ ಹಾಗೂ ಜರ್ಮನ್ ಪ್ರೆಸ್ ಆವರಣದಲ್ಲಿರುವ ನೀರು ಸಂಗ್ರಹ ಘಟಕಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರಿನ ಕೆ.ಆರ್.ಕ್ಷೇತ್ರದ ಸಿದ್ದಾರ್ಥನಗರ, ಕೆ.ಸಿ.ಬಡಾವಣೆ, ಜೆಸಿ ಬಡಾವಣೆ, ಇಟ್ಟಿಗೆಗೂಡು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಹಲವು ಬಾರಿ ಪಾಲಿಕೆ ಹಾಗೂ ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ಅಧಿಕಾರಿಗಳಿಗೆ ಸಂಬಂಧಪಟ್ಟ ವಾರ್ಡ್‍ಗಳ ಪಾಲಿಕೆ ಸದಸ್ಯರು ಮನವಿ ಮಾಡಿದ್ದರೂ ನೀರು ಪೂರೈಕೆ ಯಲ್ಲಾಗುತ್ತಿರುವ ವ್ಯತ್ಯಯವನ್ನು ಸರಿಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮೇಳಾಪುರ ಪಂಪಿಂಗ್ ಕೇಂದ್ರ, ನೀರು ಶುದ್ದೀಕರಣ ಹಾಗೂ ಜಲ ಸಂಗ್ರಹಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನೀರು ಸರಬರಾಜಾಗುತ್ತಿರುವ ಪ್ರಮಾಣದ ಬಗ್ಗೆ ದಾಖಲೀಕರಣ ಮಾಡದೆ ಇರುವುದು ಬೆಳಕಿಗೆ ಬಂದಿದೆ. ನದಿ ಮೂಲದಿಂದ ಮೇಲೆತ್ತುತ್ತಿರುವ ನೀರು ಪೂರ್ಣ ಪ್ರಮಾಣದಲ್ಲಿ ಮೈಸೂರಿನ ಜನತೆಗೆ ಲಭ್ಯವಾಗದೆ ಇರುವುದು ಕಂಡು ಬಂದಿದೆ ಎಂದು ವಿಷಾದಿಸಿದರು.

ಕಾವೇರಿ ಮತ್ತು ಕಬಿನಿಯಿಂದ ಐದು ಕೇಂದ್ರಗಳಿಂದ ಮೈಸೂರು ನಗರಕ್ಕೆ ಪ್ರತಿದಿನ 223 ಎಂಎಲ್‍ಡಿ ನೀರು ನದಿಯಿಂದ ಪೂರೈಕೆಯಾಗುತ್ತಿದೆ. ಆದರೆ ನಗರ ಪಾಲಿಕೆ ಕೇವಲ 123ರಿಂದ 125 ಎಂಎಲ್‍ಡಿ ನೀರಿಗೆ ಮಾತ್ರ ಬಿಲ್ ನೀಡುತ್ತಿದೆ. ಉಳಿದ 100 ಎಂಎಲ್‍ಡಿ ನೀರು ಎಲ್ಲಿಗೆ ಹೋಗುತ್ತಿದೆ. ಆ ನೀರು ಏನಾಯಿತು ಎಂಬ ಅಂಶ ಇದುವರೆಗೂ ಎಲ್ಲಿಯೂ ದಾಖಲಾಗಿಲ್ಲ. ನೀರು ಮೇಲೆತ್ತುವ ಕೇಂದ್ರ. ಶುದ್ಧಿಕರಣ ಘಟಕ ಹಾಗೂ ಸಂಗ್ರಹಾ ಗಾರದಲ್ಲಿ ಡಿಎಂ(ಸ್ವಯಂ ಚಾಲಿತ ಯಂತ್ರ) ಯಂತ್ರ ಅಳವಡಿಸಲಾಗಿದೆ. ಈ ಡಿಜಿಟಲೈಜ್ಡ್ ಯಂತ್ರದಲ್ಲಿ ಒಂದು ಗಂಟೆಗೆ ಎಷ್ಟು ಪ್ರಮಾಣದ ನೀರು ಮೇಲೆತ್ತಲಾಯಿತು. ಎಷ್ಟು ಪ್ರಮಾಣದ ನೀರು ಸರಬರಾಜಾಯಿತು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ ಎಷ್ಟು ಪ್ರಮಾ ಣದ ನೀರು ಕಡಿಮೆಯಾಗಿದೆ ಎಂಬ ಅಂಶ ಆ ಯಂತ್ರದಲ್ಲಿ ಸ್ವಯಂ ದಾಖಲಾಗುತ್ತದೆ. ಆದರೆ ಬಹುತೇಕ ಎಲ್ಲಾ ಕೇಂದ್ರಗಳಲ್ಲಿಯೂ ಡಿಎಂ ಯಂತ್ರಗಳು ಕಳೆದ 1 ವರ್ಷದ ಹಿಂದೆಯೇ ಕೆಟ್ಟಿದೆ ಎಂದು ತಿಳಿದು ಬಂದಿದೆ. ಇದರಿಂದ ಕುಡಿಯುವ ನೀರು ಕಳುವಾಗುತ್ತಿರುವ ಸಂಶಯ ದಟ್ಟವಾಗಿದೆ ಎಂದು ಅವರು ದೂರಿದರು.

ನೀರಿನ ಶುಲ್ಕ ಪಾವತಿಯಾಗದೆ ಇರುವ 100 ಎಂಎಲ್‍ಡಿ ನೀರು ಎಲ್ಲಿಗೆ ಹೋಗ್ತಾ ಇದೆ ಎಂಬ ದಾಖಲೆ ಗಳಿಲ್ಲ. ಇದರಿಂದ ನೀರು ಕಳವು, ಅನಧಿಕೃತವಾಗಿ ಸರಬರಾಜು, ಕೈಗಾರಿಕೆಗಳಿಗೆ ಮೀಟರ್ ಇಲ್ಲದೆ ನೀಡು ತ್ತಿರಬಹುದು. ಇಷ್ಟು ವರ್ಷದಿಂದ ವಾಟರ್ ಆಡಿಟ್ ಇಲ್ಲ. ಅಲ್ಲದೆ ಯಾರ ವಿರುದ್ದವೂ ಕ್ರಮ ಕೈಗೊಂಡಿಲ್ಲ. 3 ಎಂಎಲ್‍ಡಿ ನೀರನ್ನು ಸ್ವಚ್ಛತೆಗೆ ಬಳಕೆ ಮಾಡಲಾಗು ತ್ತಿದೆ ಎನ್ನುತ್ತಾರೆ. ಸ್ವಚ್ಛ ಮಾಡಿದ ನೀರು ನಾಲೆಗೆ ಬಿಡುತ್ತೇವೆ ಎನ್ನುತ್ತಾರೆ. ಆದರೆ ಇಷ್ಟು ಪ್ರಮಾಣದ ನೀರನ್ನು ಪೋಲು ಮಾಡುವುದು ಸರಿಯಲ್ಲ. ಸ್ವಚ್ಛತೆ ಮಾಡಿದ ನೀರನ್ನು ಶುದ್ಧೀಕರಿಸಿ ಮತ್ತೆ ಅದನ್ನು ಕುಡಿಯುವ ನೀರನ್ನು ಪರಿವರ್ತಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಮೇಳಾಪುರ ನೀರು ಕೇಂದ್ರದಿಂದ ಪ್ರತಿದಿನ 74ರಿಂದ 78 ಎಂಎಲ್‍ಡಿ ನೀರು ಪಂಪ್ ಆಗುತ್ತಿದೆ. ಈ ಕೇಂದ್ರ ದಲ್ಲಿ 3 ನೀರೆತ್ತುವ ಮೋಟರ್‍ಗಳಿದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ. ಇದರಲ್ಲಿ ಎರಡು ಮೋಟರನ್ನು ಮಾತ್ರ ಬಳಸ ಲಾಗುತ್ತಿದೆ. ಮತ್ತೊಂದು ಮೋಟಾರ್ ಅನ್ನು ಸ್ಟಾಂಡ್ ಬೈ ಆಗಿ ಇಟ್ಟುಕೊಳ್ಳಲಾಗಿದೆ. ವಿವಿಧೆಡೆ ನೀರಿನ ಸಮಸ್ಯೆ ಯಿರುವುದರಿಂದ ಸ್ಟಾಂಡ್ ಬೈ ಮೋಟರನ್ನು ದಿನದ 6 ಗಂಟೆ ಪಂಪ್ ಮಾಡಿ, 4 ಸಾವಿರ ಎಂಎಲ್ ನೀರು ಪೂರೈಸುವಂತೆ ಸೂಚನೆ ನೀಡಲಾಗಿದೆ. ಇದರಿಂದ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಗುತ್ತದೆ ಎಂದು ಹೇಳಿದ ಅವರು, ನೀರು ಸೋರಿಕೆ ತಡೆಗಟ್ಟುವುದಕ್ಕೆ ವಾಟರ್ ಆಡಿಟ್ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಅಲ್ಲದೆ ಅ.3 ಅಥವಾ 4ರಂದು ಸಿಎಂನ ಪ್ರಧಾನ ಕಾರ್ಯದರ್ಶಿಯನ್ನು ಬೇಟಿ ಮಾಡಿ ವಾಟರ್ ಆಡಿಟ್ ಮಾಡುವುದಕ್ಕೆ ಒಪ್ಪಿಗೆ ನೀಡುವಂತೆ ಕೋರುತ್ತೇನೆ ಎಂದು ಹೇಳಿದರು.

ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ 17 ಡಿಎಂಎಗಳಿಗೂ ಪ್ರತ್ಯೇಕ ಮೀಟರ್ ಇರುತ್ತದೆ. ಇದರಿಂದ ಎಲ್ಲಿಗೆ ಎಷ್ಟು ನೀರು ಹೋಗುತ್ತದೆ ಎಂಬ ಮಾಹಿತಿ ಇರುತ್ತದೆ. ವಾಟರ್ ಆಡಿಟ್ ಮಾಡುವುದರಿಂದ ಆಯಾ ಡಿಎಂಎಗೆ ಇರುವ ಅಧಿಕಾರಿಗಳಿಗೆ ತಮ್ಮ ಕೇಂದ್ರದಿಂದ ಎಷ್ಟು ಪ್ರಮಾಣದ ನೀರು ಪೂರೈಕೆಯಾಗಿದೆ ಎಂದು ತಿಳಿಯುತ್ತದೆ. ಅಲ್ಲದೆ, ಅಲ್ಲದೆ ಅಷ್ಟು ಪ್ರಮಾಣದ ನೀರಿನ ಬಿಲ್ ಸಂಗ್ರಹ ಮಾಡುವ ಹೊಣೆಗಾರಿಕೆಯೂ ಆ ಅಧಿಕಾರಿಗಳ ಮೇಲೆ ಬರುತ್ತದೆ ಎಂದು ಹೇಳಿದ ಅವರು, ಮೇಳಾಪುರ ನೀರು ಪೂರೈಕೆ ಕೇಂದ್ರದಿಂದ ಕೆ.ಆರ್.ಕ್ಷೇತ್ರ 12 ವಾರ್ಡ್‍ಗಳಿಗೆ ನೀರು ಸರಬರಾಜಾಗುತ್ತಿದೆ. ಇಂದು ನಡೆಸಿದ ಪರಿಶೀಲನೆಯ ವೇಳೆ ಕೆ.ಆರ್.ಕ್ಷೇತ್ರದ ವಾರ್ಡ್‍ಗಳಿಗೆ ನೀರು ಸರಿಯಾಗಿ ಸರಬರಾಜು ಮಾಡದೆ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ 12 ವಾರ್ಡ್‍ಗಳಿಗೆ ಪ್ರತಿ ವಾರ್ಡ್‍ಗೆ 3 ಎಂಎಲ್‍ಡಿ ನೀರನ್ನು ಕಡ್ಡಾಯವಾಗಿ ನೀಡುವ ಮೂಲಕ ಜೆಸಿ ನಗರ, ಕೆಸಿ ಬಡಾವಣೆ, ಸಿದ್ದಾರ್ಥ ನಗರ, ಇಟ್ಟಿಗೆಗೂಡು ಸೇರಿದಂತೆ ಇನ್ನಿತರೆಡೆಗಳಲ್ಲಿ ನೀರಿನ ಸಮಸ್ಯೆ ಹೋಗಲಾಡಿಸುವಂತೆ ಸೂಚನೆ ನೀಡಲಾಗಿದ್ದು, ಅ.1ರಿಂದ ನೀರು ಪೂರೈಕೆಯಲ್ಲಿ ಸುಧಾರಣೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಛಾಯಾದೇವಿ, ಜಿ.ರೂಪ, ಎಕ್ಸಿಕ್ಯೂಟಿವ್ ಇಂಜಿನಿಯರ್ ಹರೀಶ್ ಬಿ, ಅಸಿಸ್ಟೆಂಟ್ ಎಕ್ಸಿಕೂಟಿವ್ ಇಂಜಿನಿಯರ್ ಸೋಮಶೇಖರಪ್ಪ, ವಿನಯ್‍ಕುಮಾರ್, ಇಂಜಿನಿಯರ್ ಚನ್ನಬಸವೇಗೌಡ ಸೇರಿದಂತೆ ಇನ್ನಿ ತರರು ಉಪಸ್ಥಿತರಿದ್ದರು.

Translate »