ತಾಯಿ ನಿಂದಿಸಿದ ಸ್ನೇಹಿತನ ರುಂಡ ಚೆಂಡಾಡಿದ ಯುವಕ
ಮೈಸೂರು

ತಾಯಿ ನಿಂದಿಸಿದ ಸ್ನೇಹಿತನ ರುಂಡ ಚೆಂಡಾಡಿದ ಯುವಕ

September 30, 2018

ಮಳವಳ್ಳಿ: ತನ್ನ ತಾಯಿಯನ್ನು ನಿಂದಿಸಿದ ಸ್ನೇಹಿತನ ತಲೆ ಕಡಿದ ಯುವಕ, ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾದ ಭಯಾನಕ ಘಟನೆ ಶನಿವಾರ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ಚಿಕ್ಕಬಾಗಿಲು ಗ್ರಾಮದ ನಾಗಣ್ಣ ಎಂಬುವರ ಪುತ್ರ ಪಶುಪತಿ ಎಂಬಾತನೇ ಅದೇ ಗ್ರಾಮದ ತನ್ನ ಸ್ನೇಹಿತ ಪರಶಿವಮೂರ್ತಿ ಎಂಬುವರ ಪುತ್ರ ಗಿರೀಶ್ (29) ಎಂಬಾತನನ್ನು ಗ್ರಾಮದ ಹೊರ ವಲಯದಲ್ಲಿ ಹತ್ಯೆ ಮಾಡಿ, ಆತನ ತಲೆ ಕಡಿದು 24 ಕಿ.ಮೀ. ದೂರದಿಂದ ಬೈಕಿನಲ್ಲಿ ರುಂಡವನ್ನು ತೆಗೆದುಕೊಂಡು ಬಂದು ಇಲ್ಲಿನ ಪೊಲೀಸರಿಗೆ ಶರಣಾದವನಾಗಿದ್ದಾನೆ.

ಶನಿವಾರ ಮಧ್ಯಾಹ್ನ ಪಶುಪತಿ ತನ್ನ ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲೆ ಗಿರೀಶನ ರುಂಡವನ್ನು ಇಟ್ಟುಕೊಂಡು ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ. ಯುವಕ ಕೈಯ್ಯಲ್ಲಿ ರುಂಡದೊಂದಿಗೆ ಬಂದಿದ್ದನ್ನು ಕಂಡು ಬೆಚ್ಚಿ ಬಿದ್ದ ಪಟ್ಟಣ ಪೊಲೀಸರು, ಆತನನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪಶುಪತಿ `ಈತ ನನ್ನ ತಾಯಿ ಯನ್ನು ಕೆಟ್ಟದಾಗಿ ನೋಡಿದ್ದಕ್ಕೆ ಕೊಲೆ ಮಾಡಿದ್ದೇನೆ. ನನ್ನ ತಾಯಿಗೆ ಕೈಸನ್ನೆ ಮಾಡಿ ಕರೆದವನನ್ನು ಜೀವಂತ ಬಿಟ್ಟರೆ ನಾನು ಬದುಕಿದ್ದೂ ಸತ್ತಂತೆಯೇ’ ಎಂದು ಹೇಳಿದ್ದಾನೆ. ಕೊಲೆ ನಡೆದಿರುವ ಸ್ಥಳ ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಕಾರಣ ಮಳವಳ್ಳಿ ಸರ್ಕಲ್ ಇನ್ಸ್‍ಪೆಕ್ಟರ್ ಕಚೇರಿಯ ಸಿಬ್ಬಂದಿ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ನಂತರ ಬೆಳಕವಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಳಕವಾಡಿ ಪೊಲೀಸರು ಪಶುಪತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿವರ: ತಾಲೂಕಿನ ಚಿಕ್ಕಬಾಗಿಲು ಗ್ರಾಮದ ಗಿರೀಶ್ ಮತ್ತು ಪಶುಪತಿ ಸ್ನೇಹಿತರು. ಕಳೆದ ಮೂರು ದಿನಗಳ ಹಿಂದೆ ಪಶುಪತಿಯ ತಾಯಿಯನ್ನು ಕೈಸನ್ನೆ ಮಾಡಿ ಗಿರೀಶ ನಿಂದಿಸಿದನೆಂದು ಹೇಳಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ತಾಯಿ ತನ್ನ ಮಗನಿಗೆ ವಿಷಯ ತಿಳಿಸಿದ್ದಾಳೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಗಿರೀಶ್‍ನನ್ನು ಪಶುಪತಿ ಪ್ರಶ್ನಿಸಿದಾಗ ಆತ `ನಾನು ನಿನ್ನ ತಾಯಿಯನ್ನು ಬೈದಿಲ್ಲ. ಆಕೆ ಜೊತೆ ಕೆಟ್ಟದಾಗಿ ನಡೆದುಕೊಂಡಿಲ್ಲ’ ಎಂದು ಮನವರಿಕೆ ಮಾಡಿದನಲ್ಲದೆ, ಕರ್ಪೂರ ಮುಟ್ಟಿ ಪ್ರಮಾಣವನ್ನೂ ಮಾಡಿದ್ದ ಎಂದು ಹೇಳಲಾಗಿದೆ.

ಆದರೂ ಸಮಾಧಾನಗೊಳ್ಳದ ಪಶುಪತಿ ಆತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಶುಕ್ರವಾರ ರಾತ್ರಿಯೇ ಗಿರೀಶ್‍ನನ್ನು ಕೊಲ್ಲಲು ನಿರ್ಧರಿಸಿದ್ದ ಪಶುಪತಿ, ಅಂದು ರಾತ್ರಿ ಸಿನಿಮಾ ನೋಡಲು ಮಳವಳ್ಳಿಗೆ ಹೋಗೋಣ ಎಂದು ಗಿರೀಶ್‍ನನ್ನು ಕರೆದಿದ್ದ. ಆದರೆ ಮಳೆ ಬರುವ ಸಾಧ್ಯತೆ ಇರುವುದರಿಂದ ಸಿನಿಮಾಗೆ ಹೋಗುವುದು ಬೇಡ ಎಂದು ಗಿರೀಶ ಬರಲು ನಿರಾಕರಿಸಿದ ಕಾರಣ, ಅಂದು ಆತ ಬದುಕುಳಿದಿದ್ದಾನೆ.

ಮರುದಿನವೇ (ಶನಿವಾರ) ಬೆಳಿಗ್ಗೆಯೇ ಗಿರೀಶ್‍ನನ್ನು ಸಂಪರ್ಕಿಸಿದ ಪಶುಪತಿ ತುರ್ತು ಕೆಲಸವಿದೆ ಎಂದು ಕರೆದಿದ್ದಾನೆ. ಇದನ್ನು ನಂಬಿ ಆತನ ಜೊತೆ ಗಿರೀಶ ಬೈಕ್‍ನಲ್ಲಿ ತೆರಳಿದ್ದಾನೆ. ಗ್ರಾಮದ ಹೊರ ವಲಯದಲ್ಲಿರುವ ಕೊಳತ್ತೂರು ಕೆರೆಯ ಬಳಿ ಬೈಕ್ ನಿಲ್ಲಿಸಿದ ಪಶುಪತಿ, ಗಿರೀಶ್‍ನೊಂದಿಗೆ ಗಲಾಟೆ ಮಾಡಿ, ಕೊಡಲಿಯಿಂದ ಕೊಚ್ಚಿ ಆತನನ್ನು ಹತ್ಯೆ ಮಾಡಿದ್ದಲ್ಲದೇ, ತಲೆಯನ್ನು ಕಡಿದು ರುಂಡದೊಂದಿಗೆ ಪೊಲೀಸ್ ಠಾಣೆಗೆ ತೆರಳಿ, ಶರಣಾಗಿದ್ದಾನೆ. ಕೊಲೆಯಾದ ಗಿರೀಶ ಚಿಕ್ಕಬಾಗಿಲು ಗ್ರಾಮದ ಪರಶಿವಮೂರ್ತಿ ಅವರಿಗೆ ಒಬ್ಬನೇ ಮಗ. ಕಳೆದ ಎರಡು ವರ್ಷಗಳ ಹಿಂದೆ ಈತ ಹೆಬ್ಬಣಿ ಗ್ರಾಮದ ಯುವತಿಯನ್ನು ವಿವಾಹವಾಗಿದ್ದು, ಈತನಿಗೆ 2 ತಿಂಗಳ ಮಗು ಇದೆ. ಈತನ ತಂದೆ ಪರಶಿವಮೂರ್ತಿ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದು, ಮನೆಯ ಸಂಪೂರ್ಣ ಜವಾಬ್ದಾರಿ ಈತನದ್ದೇ ಆಗಿತ್ತು.

ಹಂತಕ ಪಶುಪತಿ ಇದೇ ಗ್ರಾಮದ ಗೊಬ್ಬರದ ಅಂಗಡಿ ಮಾಲೀಕ ನಾಗಣ್ಣ ಅವರ ಪುತ್ರ. ಬೆಂಗಳೂರಿನಲ್ಲಿದ್ದ ಈತ ಕಳೆದ ನಾಲ್ಕೈದು ತಿಂಗಳ ಹಿಂದೆಯಷ್ಟೇ ಸ್ವಗ್ರಾಮಕ್ಕೆ ಹಿಂತಿರುಗಿ ತಂದೆಯ ಗೊಬ್ಬರದ ಅಂಗಡಿ ವ್ಯವಹಾರ ಹಾಗೂ ವ್ಯವಸಾಯ ಮಾಡಿಕೊಂಡಿದ್ದ. ಹತ್ಯೆಯ ಸುದ್ದಿ ಹರಡುತ್ತಿದ್ದಂತೆಯೇ ಚಿಕ್ಕಬಾಗಿಲು ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗ್ರಾ

ಮಕ್ಕೆ ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜು, ತಹಸೀಲ್ದಾರ್, ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಕಾಂತ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Translate »