ರಾಹು, ಕೇತು, ಶನಿಗಳು ಸೇರಿ ನನ್ನ ಸೋಲಿಸಿ ಬಿಟ್ಟವು…!?
ಮೈಸೂರು

ರಾಹು, ಕೇತು, ಶನಿಗಳು ಸೇರಿ ನನ್ನ ಸೋಲಿಸಿ ಬಿಟ್ಟವು…!?

September 30, 2018

ನಂಜನಗೂಡು: ನಾನು ಮುಖ್ಯಮಂತ್ರಿಯಾಗುವುದನ್ನು ತಪ್ಸೋಕೆ ರಾಹು-ಕೇತು, ಶನಿ ಎಲ್ಲಾ ಸೇರ್ಕೊಂಡು ನನ್ನನ್ನ ಸೋಲಿಸಿಬಿಟ್ಟವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿನ ಬಗ್ಗೆ ವಿಶ್ಲೇಷಿಸಿದರು.

ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಡಿ ಆಯೋಜಿಸಿದ್ದ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಹೊಟ್ಟೆಗಿಚ್ಚಿಗೆ ಔಷಧಿ ಇದ್ಯಾ…? ಏನಪ್ಪಾ… ನಾನು ಮತ್ತೆ ಮುಖ್ಯಮಂತ್ರಿ ಆಗಬಾರದು ಅಂತ ವಿರೋಧಿ ಗಳೆಲ್ಲಾ ಒಟ್ಟಾಗಿ ಸೇರಿ ಕಾಲೆಳೆದರು. ರಾಹು-ಕೇತು, ಶನಿ ಎಲ್ಲಾ ಸೇರ್ಕೊಂಡು ನನ್ನನ್ನ ಸೋಲಿಸಿಬಿಟ್ಟರು ಎಂದರು. ವರುಣಾ ನನಗೆ ಅದೃಷ್ಟದ ಕ್ಷೇತ್ರ. ಒಂದು ಬಾರಿ ಗೆದ್ದು ವಿರೋಧ ಪಕ್ಷದ ನಾಯಕನಾದೆ. ಎರಡನೇ ಬಾರಿ ಗೆದ್ದು ಮುಖ್ಯಮಂತ್ರಿಯಾದೆ. ಮತ್ತೆ ವರುಣಾದಲ್ಲೇ ನಿಂತಿದ್ರೆ ಖಂಡಿತಾ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿ ಆಗಬಹುದಿತ್ತು.

ಆದರೆ ಚಾಮುಂಡೇಶ್ವರಿಯಲ್ಲಿ ನಿಲ್ಲುತ್ತೇನೆ ಅಂತ ಆ ಕ್ಷೇತ್ರದ ಜನತೆಗೆ ಮಾತು ಕೊಟ್ಟಿದ್ದರಿಂದ ಅಲ್ಲೇ ಹೋಗಿ ನಿಲ್ಲಬೇಕಾಯಿತು. ಇನ್ನು ಬಾದಾಮಿಗೆ ಪ್ರಚಾರಕ್ಕೆ ಹೋಗದೇ ಹೋದ್ರೂ, ಅಲ್ಲಿನ ಜನ ನನ್ನ ಕೈಹಿಡಿದಿದ್ದಾರೆ ಎಂದು ಹೇಳಿದರು. ನನ್ನನ್ನ ಎರಡು ಬಾರಿ ಹೆಚ್ಚು ಅಂತರದಿಂದ ಗೆಲ್ಲಿಸುವ ಜೊತೆಗೆ ನನ್ನ ಮಗ ಡಾ. ಯತೀಂದ್ರನನ್ನು 58 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುವ ಮೂಲಕ ರಾಜ್ಯದಲ್ಲೇ ಅತ್ಯಂತ ಹೆಚ್ಚು ಅಂತರದಲ್ಲಿ ಗೆದ್ದಿರುವ ಮೂರನೇ ಶಾಸಕ ಎಂಬ ಹೆಗ್ಗಳಿಕೆಯನ್ನು ನೀಡಿರುವ ವರುಣಾ ಕ್ಷೇತ್ರದ ಜನರ ಋಣ ತುಂಬಾ ದೊಡ್ಡದು. ಇಲ್ಲಿನ ಮತದಾರರ ಋಣ ತೀರಿಸಲು ನಾನು ರಾಜಕಾರಣದಲ್ಲಿರುವವರೆಗೂ ವರುಣಾ
ಕ್ಷೇತ್ರದ ಅಭಿವೃದ್ಧಿಗೆ ನೆರವಾಗುತ್ತೇನೆ ಎಂದು ಭರವಸೆ ನೀಡಿದರು.

ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ವರುಣಾ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು, ನಾನು ಲೋಕಸಭೆಗೆ ಸ್ಪರ್ಧಿಸಿದ ಎರಡೂ ಚುನಾವಣೆಗಳನ್ನು ಈ ಕ್ಷೇತ್ರದ ಜನರು ಹೆಚ್ಚು ಮತ ನೀಡಿದ್ದಾರೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ರಾಜ್ಯದ ಜನರ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದರು. ವರುಣಾ ಶಾಸಕ ಡಾ. ಯತೀಂದ್ರ ಮಾತನಾಡಿ, ಕಳೆದ ವಿಧಾನಸಭೆಗೂ ಮುನ್ನವೇ ಈ ಸವಲತ್ತುಗಳನ್ನು ವಿತರಿಸಬೇಕಾಗಿತ್ತು.

ಆದರೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ಸಾಧ್ಯವಾಗಿರಲಿಲ್ಲ. ಇದೀಗ 1339 ಫಲಾನುಭವಿಗಳಿಗೆ 5.41 ಕೋಟಿ ರೂ.ಗಳ ಸವಲತ್ತು ವಿತರಿಸಲಾಗಿದೆ ಎಂದು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷ ಹೆಜ್ಜಿಗೆ ಗೋವಿಂದರಾಜನ್, ಜಿಪಂ ಸದಸ್ಯೆ ಲತಾ ಸಿದ್ದಶೆಟ್ಟಿ, ಮಾಜಿ ಸದಸ್ಯೆ ಸುಧಾ ಮಹದೇವಯ್ಯ, ತಾಪಂ ಸದಸ್ಯರಾದ ರತ್ನಮ್ಮ, ಲಿಂಗರಾಜಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಹೆಚ್.ಎಸ್.ಮೂಗಶೆಟ್ಟಿ, ಪಿ.ಶ್ರೀನಿವಾಸ್, ಸ್ವಾಮಿ, ಗುರುಸ್ವಾಮಿ, ಕೆಂಪಣ್ಣ ಇನ್ನಿತರರಿದ್ದರು.

Translate »