ಉದ್ಯಾನವನ, ಕೆರೆಗಳ ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾಗಿ
ಮೈಸೂರು

ಉದ್ಯಾನವನ, ಕೆರೆಗಳ ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾಗಿ

July 19, 2018
  • ಕೆಂಪೇಗೌಡ ಸ್ಮರಣೆ ಕಾರ್ಯಕ್ರಮದಲ್ಲಿ ಯುವಸಂಘಟನೆಗಳಿಗೆ ಸಚಿವ ಜಿ.ಟಿ.ದೇವೇಗೌಡ ಕರೆ

ಮೈಸೂರು: ಮೈಸೂರಿನ ಯುವ ಸಂಘಟನೆಗಳು ಯಾವುದಾದರೂ ಉದ್ಯಾನವನ ಮತ್ತು ಗ್ರಾಮೀಣ ಪ್ರದೇಶದ ಯಾವುದಾದರೂ ಕೆರೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು. ಹೀಗೆ ಮಾಡಿದರೆ ಮಾತ್ರ ಕೆಂಪೇಗೌಡರ ಸ್ಮರಣೆ ಮಾಡಿದ್ದಕ್ಕೂ ಅರ್ಥ ಬರುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದರು.

ಮೈಸೂರಿನ ರೋಟರಿ ಶಾಲೆ ಸಭಾಂಗಣದಲ್ಲಿ ಕರ್ನಾಟಕ ಸೇನಾ ಪಡೆ ಮೈಸೂರು ಜಿಲ್ಲಾ ಘಟಕವು ನಾಡಪ್ರಭು ಕೆಂಪೇಗೌಡರ ಸ್ಮರಣೆ ಅಂಗವಾಗಿ ಬುಧವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೆಂಪೇಗೌಡ ಸೇವಾ ಪ್ರಶಸ್ತಿ ಪ್ರದಾನ ಮತ್ತು ಮಹಾರಾಣಿ ಕಲಾ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ, ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಮಾದರಿ ಆಡಳಿತ ನೀಡಿದವರು. ಬೆಂಗಳೂರು ನಿರ್ಮಿಸಿ, ಕೆರೆಕಟ್ಟೆಗಳನ್ನು ಕಟ್ಟಿಸಿದರು. ಕಾಟನ್ ಪೇಟೆ, ಬಿನ್ನಿಪೇಟೆ ಇನ್ನಿತರ ಬಡಾವಣೆಗಳನ್ನು ನಿರ್ಮಿಸಿ, ಕರ ಕುಶಲ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಅವರಿಗೆ ಸ್ಥಳದಲ್ಲಿಯೇ ಉದ್ಯೋಗ ಮತ್ತು ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವ ಮೂಲಕ ಎಲ್ಲಾ ಸಮುದಾಯದವರ ಪ್ರೀತಿಗೆ ಪಾತ್ರರಾಗಿದ್ದವರು ಎಂದರು.

ಕೆಂಪೇಗೌಡ ಅವರ ಸಾಧನೆ ನಾಡಿನ ಪ್ರತಿ ಹಳ್ಳಿಗೂ ತಲುಪಬೇಕು. ಪ್ರತಿ ಹಳ್ಳಿಗಳಲ್ಲೂ ಇರುವ ಕೆರೆ ಕಟ್ಟೆಗಳ ಉಳಿಸಿಕೊಳ್ಳಬೇಕು. ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ, ಉದ್ಯೋಗ ಸೃಷ್ಟಿಸಬೇಕು. ಗ್ರಾಮೀಣ ಜನರು ನೆಮ್ಮದಿಯಿಂದ ಬದುಕು ನಡೆಸುವಂತಾಗಬೇಕು ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಸಚಿವರು, ಎಸ್.ಜಯಪ್ರಕಾಶ್ (ಚಲನಚಿತ್ರ), ಆರ್.ಜೇಸುದಾಸ್ (ಸೇವೆ), ರವಿಕುಮಾರ್ (ಹೋರಾಟ), ಬಿ.ಕುಮಾರ್ (ಸಂಘಟನೆ), ಡಾ.ಸಿ.ವೈ.ಶಿವೇಗೌಡ (ಸಮಾಜ ಸೇವೆ), ಡಾ.ಚಂದ್ರಶೇಖರ್ (ವೈದ್ಯಕೀಯ ಸೇವೆ), ಸಿ.ನಾರಾಯಣಗೌಡ (ಪ್ರವಾಸೋದ್ಯಮ ಕ್ಷೇತ್ರ) ಇವರಿಗೆ ಕೆಂಪೇಗೌಡ ಸೇವಾ ಪ್ರಶಸ್ತಿ ನೀಡಿ ಗೌರವಿಸಿದರು. ಮಹಾರಾಣಿ ಮಹಿಳಾ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿದರು.

ಇದಕ್ಕೂ ಮುನ್ನ ಡಾ.ಎಸ್.ಪಿ.ಯೋಗಣ್ಣ, ಬ್ರಾಹ್ಮಣ ಮಹಾಸಭಾ ªಲಯ ಉಪಾಧ್ಯಕ್ಷ ಡಾ.ಬಿ.ಆರ್.ನಟರಾಜ್ ಜೋಯಿಸ್, ಹಿರಿಯ ಮುಖಂಡ ಡಾ.ಕೆ.ರಘುರಾಂ ವಾಜಪೇಯಿ, ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಮೈಸೂರು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ ಇನ್ನಿತರರು ಉಪಸ್ಥಿತರಿದ್ದರು.

Translate »