ಇಡಿ ಮುಂದೆ ಡಿಕೆಶಿ ಪುತ್ರಿ ಐಶ್ವರ್ಯಾ ವಿಚಾರಣೆಗೆ ಹಾಜರು
ಮೈಸೂರು

ಇಡಿ ಮುಂದೆ ಡಿಕೆಶಿ ಪುತ್ರಿ ಐಶ್ವರ್ಯಾ ವಿಚಾರಣೆಗೆ ಹಾಜರು

September 13, 2019

ತಂದೆ ಫಾರ್ಮುಲಾ ಅನುಸರಿಸಿದ ಪುತ್ರಿ
ಇಂದೂ ವಿಚಾರಣೆಗೆ ಹಾಜರಾಗಲು ಸಮನ್ಸ್
ನವದೆಹಲಿ, ಸೆ.12- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಇಂದು ದೆಹಲಿಯ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜ ರಾದರು. ಅಧಿಕಾರಿಗಳ ಪ್ರಶ್ನೆಗಳಿಗೆ ತಂದೆಯ ಫಾರ್ಮುಲಾ ಬಳಸಿರುವ ಐಶ್ವರ್ಯಾ ಶಿವಕುಮಾರ್ ಖಡಕ್ ಉತ್ತರ ನೀಡಿ ದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿರುವ ಐಶ್ವರ್ಯಾ, ನನಗೆ ಗೊತ್ತಿರುವ ಮತ್ತು ನೆನಪಿನಲ್ಲಿರುವ ವಿಷಯಗಳನ್ನು ಮಾತ್ರ ಹೇಳುತ್ತೇನೆ. ನನಗೆ ತಿಳಿಯದಿರದ ಪ್ರಶ್ನೆಗಳಿಗೆ ದಾಖಲೆ ನೋಡಿ ಮತ್ತು ಚಾರ್ಟೆಡ್ ಅಕೌಂಟೆಂಟ್ ಬಳಿ ಕೇಳಿ ಹೇಳುತ್ತೇನೆ. ನನಗೆ ಗೊತ್ತಿಲ್ಲದೇ ಯಾವ ವ್ಯವಹಾರಗಳು ನಡೆದಿಲ್ಲ. ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ನನ್ನ ಎಲ್ಲ ವ್ಯವಹಾರಗಳಿಗೆ ತಂದೆಯ ಆರ್ಥಿಕ ನೆರವು ಇದೆ. ಎಲ್ಲ ವ್ಯವಹಾರಗಳನ್ನು ಘೋಷಿಸಿಕೊಂಡುತೆರಿಗೆಯನ್ನು ಪಾವತಿಸಿದ್ದೇನೆ. ತಂದೆ ಜೊತೆ ನಾನು ವ್ಯವಹಾರಗಳನ್ನು ನಿರ್ವ ಹಿಸುತ್ತಿದ್ದೇನೆ ಎಂದು ಐಶ್ವರ್ಯ ದಿಟ್ಟ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ವಿಚಾರಣೆಗೆ ಹಾಜರಾದಾಗ ತಂದೆ ಶಿವಕುಮಾರ್ ಅವರನ್ನು ಇಡಿ ಕಚೇರಿಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಡಿಕೆಶಿ ಎಲ್ಲ ಪ್ರಶ್ನೆಗಳಿಗೂ ಧೈರ್ಯವಾಗಿ ಉತ್ತರಿಸುವಂತೆ ಪುತ್ರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ನಾಳೆಯು ವಿಚಾರಣೆಗೆ ಹಾಜರಾಗುವಂತೆ ಐಶ್ವರ್ಯಾಗೆ ಇಡಿ ಸಮನ್ಸ್ ನೀಡಿದೆ.

ಡಿಕೆಶಿಗೆ ಹೈ ಬಿಪಿ, ಹೊಟ್ಟೆ ನೋವು: ಆಸ್ಪತ್ರೆಗೆ ದಾಖಲು
ನವದೆಹಲಿ: ಇಂದು ಒಂದು ಕಡೆ ಮಗಳ ವಿಚಾರಣೆ ನಡೆ ಯುತ್ತಿದ್ದರೆ, ಮಗದೊಂದು ಕಡೆ ಡಿಕೆ ಶಿವಕುಮಾರ್ ವಿಚಾರಣೆ ಕೂಡ ನಡೆದಿತ್ತು. ವಿಚಾರಣೆ ವೇಳೆ ಹೈಬಿಪಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಡಿಕೆಶಿ ಅವರನ್ನು ಹತ್ತಿರದ ರಾಮ ಮನೋ ಹರ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಸದ್ಯ ವೈದ್ಯರ ಸಲಹೆ ಮೇರೆಗೆ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಶುಕ್ರವಾರ ಇಡಿ ಕಸ್ಟಡಿ ಅವಧಿ ಮುಗಿಯಲಿದ್ದು, ನಾಳೆ ಮಧ್ಯಾಹ್ನ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತಿದೆ. ವಿಚಾರಣೆಗಾಗಿ ಮತ್ತೆ 4 ದಿನ ಕಸ್ಟಡಿಗೆ ಒಪ್ಪಿಸುವಂತೆ ಇಡಿ ಕೋರುವ ಸಾಧ್ಯತೆ ಇದೆ. ಸಮನ್ಸ್ ನೀಡಿದ ಸಂದರ್ಭದಲ್ಲಿ ಡಿ.ಕೆ.ಶಿ 4 ದಿನ ವಿಚಾರಣೆಗೆ ಹಾಜರಾಗಿದ್ದರು. ಅಧಿಕಾರಿಗಳು ವಶಕ್ಕೆ ಪಡೆದ ಮೇಲೆ 10 ದಿನ ವಿಚಾರಣೆ ನಡೆಸಿದ್ದಾರೆ. ಒಟ್ಟು 14 ದಿನ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಹಾಜರಾಗಿದ್ದು, ಜಾಮೀನು ನೀಡಬೇಕೆಂದು ಡಿಕೆಶಿ ಪರ ವಕೀಲರು ನಾಳೆ ನ್ಯಾಯಾಲಯದ ಮುಂದೆ ಮನವಿ ಮಾಡುವ ಸಾಧ್ಯತೆಗಳಿವೆ. ಇತ್ತ ಇಡಿ ಪರ ವಕೀಲರು ಡಿ.ಕೆ.ಶಿವಕುಮಾರ್ ವಿಚಾರಣೆಗೆ ಸ್ಪಂದಿಸುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕಲೆ ಹಾಕಬೇಕಿದೆ. ಹೆಚ್ಚುವರಿ ನಾಲ್ಕು ದಿನ ಕಸ್ಟಡಿ ವಿಸ್ತರಿಸುವಂತೆ ಇಡಿ ಮನವಿ ಮಾಡುವ ಸಾಧ್ಯತೆಗಳಿವೆ.

Translate »