ಸಿಎಂ ಬಿಎಸ್‍ವೈ ಭೇಟಿಗೆ ಅವಕಾಶ ನೀಡದ ಅಮಿತ್ ಷಾ
ಮೈಸೂರು

ಸಿಎಂ ಬಿಎಸ್‍ವೈ ಭೇಟಿಗೆ ಅವಕಾಶ ನೀಡದ ಅಮಿತ್ ಷಾ

September 17, 2019
  • ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಬೆಳವಣಿಗೆ
  • ಸಿಎಂ, ಸಚಿವರ ಕುಟುಂಬಗಳ ಹಸ್ತಕ್ಷೇಪದ ಮಾಹಿತಿ ಸಂಗ್ರಹ

ಬೆಂಗಳೂರು,ಸೆ. 16(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮಯಾವಕಾಶ ನೀಡದ ಕೇಂದ್ರ ಗೃಹ ಸಚಿವ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರನ್ನು ದೆಹಲಿಗೆ ಕರೆಸಿ ಕೊಂಡು, ಸಮಾಲೋಚನೆ ನಡೆಸಿರುವುದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಶುಕ್ರವಾರ ಮತ್ತು ಶನಿ ವಾರ ನೆರೆ ಪೀಡಿತ ಪ್ರದೇಶಗಳ ಪಕ್ಷದ ಶಾಸಕರ ಸಭೆ ಕರೆದಿದ್ದ ಸಂದರ್ಭದಲ್ಲಿ ಬೆಳಗಾವಿಯನ್ನು ಪ್ರತಿನಿಧಿಸುವ ಲಕ್ಷ್ಮಣ್ ಸವದಿ, ಮುಖ್ಯಮಂತ್ರಿಯವರ ಸಭೆಗೆ ಗೈರು ಹಾಜರಾಗಿದ್ದರು. ಆದರೆ ಅಂದೇ ಅವರು ದೆಹಲಿ ಯಲ್ಲಿ ಅಮಿತ್ ಷಾ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿರುವುದು ಯಡಿಯೂರಪ್ಪ ನವರಿಗೆ ಇರಿಸುಮುರಿಸು ಉಂಟು ಮಾಡಿದೆ.

ಅನರ್ಹಗೊಂಡ ಶಾಸಕರ ಸಮಸ್ಯೆ ಪರಿಹಾರ ಮತ್ತು ಸರ್ಕಾರದ ಮಟ್ಟದಲ್ಲಿ ಕೆಲವು ರಾಜಕೀಯ ತೀರ್ಮಾನ ಕೈಗೊಳ್ಳಲು ಅನುಮೋದನೆ ಪಡೆಯುವ ಉದ್ದೇಶದಿಂದ ಕಳೆದ ಬುಧವಾರ ದೆಹಲಿಗೆ ತೆರಳಿ ಅಮಿತ್ ಷಾ ಅವರನ್ನು ಭೇಟಿ ಮಾಡಲು ಅವರ ಸಮಯಾವಕಾಶ ಕೋರಿದ್ದರು. ಆದರೆ ಕೊನೆ ಗಳಿಗೆಯಲ್ಲಿ ನೀವು ದೆಹಲಿಗೆ ಬರುವುದು ಬೇಡ, ಅಲ್ಲಿಯೇ ಕೆಲಸ ಮಾಡಿ ಎಂದು ಗೃಹ ಸಚಿವಾಲಯದಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಯವರು ತಮ್ಮ ಪ್ರವಾಸ ರದ್ದುಗೊಳಿಸಿದರು. ಇದಾದ 2 ದಿನಗಳ ಬಳಿಕ ಸವದಿಯವ ರನ್ನು ಕರೆಸಿ ಮಾತನಾಡಿ, ಸರ್ಕಾರದ ಆಡಳಿತ ಕಾರ್ಯವೈಖರಿ ಮತ್ತು ವಿಧಾನಸಭೆ ವಿಸರ್ಜಸಿ ಚುನಾವಣೆಗೆ ತೆರಳಿದರೆ, ಪರಿಸ್ಥಿತಿ ಏನು ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ಸವದಿಯಿಂದ ಮಾಹಿತಿ ಪಡೆದ ನಂತರವೇ ಅಮಿತ್ ಷಾ, ಮುಖ್ಯಮಂತ್ರಿ ಇಲ್ಲವೇ ಸಚಿವರ ಕುಟುಂಬಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಎಚ್ಚರಿಕೆಯನ್ನು ಯಡಿಯೂರಪ್ಪನವರಿಗೆ ನೀಡಿದ್ದರು. ಸಚಿವರು ತಮಗೆ ವಹಿಸಿರುವ ಖಾತೆಗಳ ನಿರ್ವಹಣೆ ಮಾಡಬೇಕು, ಆದರೆ ಕೆಲವರು ತಮ್ಮ ಮನೆಯವರಿಗೆ ಅಧಿಕಾರ ಕೊಟ್ಟು, ನೆಪಮಾತ್ರಕ್ಕೆ ಮಂತ್ರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸಚಿವರಿಗೆ ಎಚ್ಚರಿಕೆ ನೀಡಿ, ಜೊತೆಗೆ ನಿಮ್ಮ ಆಡಳಿತದಲ್ಲಿ ನಿಮ್ಮ ಕುಟುಂಬದ ಸದಸ್ಯರು ಹಸ್ತಕ್ಷೇಪ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದರಿಂದ ಪಕ್ಷ ಮತ್ತು ಸರ್ಕಾರಕ್ಕೆ ಅದರಲ್ಲೂ ನಮಗೆ ತೀವ್ರ ಮುಜುಗರವುಂಟು ಮಾಡುತ್ತದೆ. ಇನ್ನು ಮುಂದೆ ಇದಕ್ಕೆ ಅವಕಾಶ ನೀಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೆ ಮುಖ್ಯಮಂತ್ರಿ ಯವರ ಪುತ್ರ ವಿಜಯೇಂದ್ರ ಪತ್ರಿಕಾ ಹೇಳಿಕೆ ನೀಡಿ, ನಾನು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Translate »