ಬೆಂಗಳೂರು, ಸೆ.16(ಕೆಎಂಶಿ)-ಉತ್ತರ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗಿ ಪ್ರವಾಹ ಉಂಟಾದ ಪರಿಣಾಮ ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನ ವನ್ನು ಬೆಂಗಳೂರಿನಲ್ಲಿಯೇ ನಡೆಸಲು ತೀರ್ಮಾನಿಸಿದೆ. ಕಳೆದ 2006ರಿಂದಲೂ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿ ಕಾರಕ್ಕೆ ಬಂದಾಗಿನಿಂದಲೂ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿರುವ ಸುವರ್ಣಸೌಧದಲ್ಲಿ 10 ದಿನಗಳ ಕಾಲ ನಡೆಸಲಾಗುತ್ತಿತ್ತು. ಭೀಕರ ಪ್ರವಾಹ ಉಂಟಾಗಿ ಲಕ್ಷಾಂತರ ಜನರು ಸಂತ್ರಸ್ತರಾಗಿ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಹೀಗಾಗಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಬದಲು ರಾಜಧಾನಿ ಬೆಂಗಳೂರಿನಲ್ಲೇ ನಡೆಸಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿ ದ್ದಾರೆ. ಸಾಮಾನ್ಯವಾಗಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಬೇಕೆಂದರೆ ಕನಿಷ್ಠ ಪಕ್ಷ 2 ತಿಂಗಳು ಮುಂಚಿತವಾಗಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ರಾಜ್ಯ ಸರ್ಕಾರದಿಂದ ಚಳಿಗಾಲ ಅಧಿವೇಶನ ನಡೆಸುವ ಕುರಿತಂತ ಬೆಳಗಾವಿ ಜಿಲ್ಲಾಡಳಿತಕ್ಕೆ ಯಾವುದೇ ರೀತಿಯ ಮಾಹಿತಿ ತಲುಪಿಲ್ಲ ಎನ್ನಲಾ ಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಉತ್ತರ ಕರ್ನಾಟಕ ಜನತೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಆತಂಕವು ಸರ್ಕಾರವನ್ನು ಕಾಡುತ್ತಿದೆ. ಏಕೆಂದರೆ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗಿ ನಿರೀಕ್ಷೆಗೂ ಮೀರಿದ ನಷ್ಟ ಸಂಭವಿಸಿದೆ. ಈ ಭಾಗದಲ್ಲೇ ಸುಮಾರು 20 ಸಾವಿರ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದ್ದರೂ ಈವರೆಗೂ ಒಂದೇ ಒಂದು ನಯಾ ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ರಾಜ್ಯಸರ್ಕಾರ ಒಂದಿಷ್ಟು ಪರಿಹಾರ ಬಿಡುಗಡೆ ಮಾಡಿ ಕಣ್ಣೊರೆಸುವ ತಂತ್ರ ಮಾಡಿದೆ. ಇದು ಸಹಜವಾಗಿ ಈ ಭಾಗದ ಜನರ ಕಣ್ಣು ಕೆಂಪಾ ಗುವಂತೆ ಮಾಡಿದೆ. ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಿದರೆ ಈ ಭಾಗದ ಜನರ ಆಕ್ರೋಶಕ್ಕೆ ತುತ್ತಾಗುವುದು ಜೊತೆಗೆ ಪ್ರತಿಪಕ್ಷಗಳು ಮುಗಿಬೀಳಲಿವೆ ಎಂಬ ಹಿನ್ನೆಲೆಯಲ್ಲಿ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸದಿರಲು ಸರ್ಕಾರ ತೀರ್ಮಾನಿ ಸಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಅಧಿವೇಶನ ನಡೆಸಿದರೆ ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ತರಾಟೆಗೆ ತೆಗೆದುಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಖಚಿತ ಎಂಬ ಸುಳಿವು ಅರಿತಿರುವ ಸಿಎಂ ಯಡಿಯೂರಪ್ಪ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸದೆ ಬೆಂಗಳೂರಿನಲ್ಲೇ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.