ಬೆಂಗಳೂರು,ಸೆ.16-ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಜೆಪಿ ಭವನದಲ್ಲಿ ಇಂದು ಸಂಜೆ ನಡೆದ ಕೊಡಗು ಜಿಲ್ಲೆ ಜೆಡಿಎಸ್ ಮುಖಂಡರ ಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿ ಸಭೆಯನ್ನು ರದ್ದುಪಡಿಸಿದ ಘಟನೆ ನಡೆದಿದೆ. ಮಾಜಿ ಸಚಿವ ಜೀವಿಜಯ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಗಣೇಶ್ ಗುಂಪುಗಳ ನಡುವೆ ದೇವೇಗೌಡರ ಸಮ್ಮುಖ ದಲ್ಲೇ ಮಾತಿನ ಚಕಮಕಿ ತಾರಕಕ್ಕೇರಿದ್ದು ಸಭೆ ಮುಂದುವರೆಸುವ ಲಕ್ಷಣಗಳೇ ಕಾಣದಿದ್ದಾಗ, ಅನ್ಯಮಾರ್ಗವಿಲ್ಲದೇ ದೇವೇಗೌಡರು ಸಭೆಯನ್ನು ರದ್ದುಪಡಿಸಿದರು. ಸಭೆಯ ಆರಂಭದಲ್ಲೇ ಮಾತಿನ ಚಕಮಕಿ ಶುರುವಾಯಿತು. ವೇದಿಕೆಯಲ್ಲಿದ್ದ ದೇವೇಗೌಡರು ಕೊಡಗು ಜಿಲ್ಲಾಧ್ಯಕ್ಷ ಗಣೇಶ್ ಅವರನ್ನು ವೇದಿಕೆಗೆ ಕರೆದರು. ಗಣೇಶ್ ವೇದಿಕೆಯಲ್ಲಿ ಆಸೀನರಾಗುತ್ತಿದ್ದಂತೆಯೇ ಜೀವಿಜಯ ಅವರನ್ನು ಕರೆದಿಲ್ಲವೆಂದು ಅವರ ಬೆಂಬಲಿಗರು ಗದ್ದಲ ಆರಂಭಿಸಿದರು. ಈ ವೇಳೆ ವೇದಿಕೆಗೆ ಬರುವಂತೆ ಜೀವಿಜಯ ಅವರನ್ನು ಸ್ವತಃ ದೇವೇಗೌಡರೇ ಕರೆದಾಗಲೂ ಅವರು ವೇದಿಕೆಗೆ ತೆರಳದೇ ಕುಳಿತಿದ್ದರು. ಆಗ ಗೌಡರೇ ಕೆಳಗಿಳಿದು ಬಂದು ಜೀವಿಜಿಯರನ್ನು ವೇದಿಕೆಗೆ ಕರೆದೊಯ್ದರು. ಸಭೆಯಲ್ಲಿ ಮೊದಲಿಗೆ ಜೀವಿಜಯಾ ಅವರಿಗೆ ಮಾತನಾಡಲು ಗೌಡರು ಅವಕಾಶ ನೀಡಿದರು. ಅವರು ಭಾಷಣ ಆರಂಭಿಸುತ್ತಿದ್ದಂತೆಯೇ ಸಿಟ್ಟಿಗೆದ್ದ ಗಣೇಶ್ ಬೆಂಬಲಿಗರು, ‘ಜೀವಿಜಯ ಪಕ್ಷದಲ್ಲಿ ಏನೂ ಅಲ್ಲ. ಅವರು ಕೇವಲ ಸೋಮವಾರಪೇಟೆಗೆ ಸೀಮಿತ. ಜಿಲ್ಲಾಧ್ಯಕ್ಷರಾಗಿರುವ ಗಣೇಶ್ ಮೊದಲು ಮಾತನಾಡಬೇಕು’ ಎಂದು ಗದ್ದಲ ಆರಂಭಿಸಿದರು. ಈ ವೇಳೆ ಗಣೇಶ್ ಮತ್ತು ಜೀವಿಜಯ ಬೆಂಬಲಿಗರ ನಡುವೆ ತೀವ್ರ ವಾಕ್ಸಮರ ಏರ್ಪಟ್ಟು, ಗದ್ದಲ ಹೆಚ್ಚಾಯಿತು. ಸಭೆ ನಡೆಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಮಧ್ಯ ಪ್ರವೇಶಿಸಿದ ದೇವೇಗೌಡರು, ಪಿತೃಪಕ್ಷದ ನಂತರ ತಾವೇ ಕೊಡಗಿಗೆ ಬಂದು ಸಮಸ್ಯೆ ಇತ್ಯರ್ಥಪಡಿಸುವುದಾಗಿ ತಿಳಿಸಿ, ಸಭೆಯನ್ನು ಮುಕ್ತಾಯಗೊಳಿಸಿದರು.
ಮೈಸೂರು