ಇಂದಿನಿಂದ 10 ದಿನ ಯುವ ಸಂಭ್ರಮ
ಮೈಸೂರು

ಇಂದಿನಿಂದ 10 ದಿನ ಯುವ ಸಂಭ್ರಮ

September 17, 2019

ಮೈಸೂರು,ಸೆ.16(ಪಿಎಂ)-ಈ ಬಾರಿಯ `ಯುವ ಸಂಭ್ರಮ’ಕ್ಕೆ ನಾಳೆ (ಸೆ.17) ಮಾನಸ ಗಂಗೋತ್ರಿಯ ಬಯಲು ರಂಗಮಂದಿರ ದಲ್ಲಿ ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ ನೀಡಲಿದ್ದಾರೆ. ಕೇವಲ ಹಾಡು-ಕುಣಿತಕ್ಕೆ ಸೀಮಿತಗೊಳ್ಳದೇ ಮೈಮ್, ಸ್ಕಿಟ್ ಹಾಗೂ ಲಘು ನಾಟಕ ಪ್ರದರ್ಶನಕ್ಕೂ ಈ ಬಾರಿ ಯುವ ಸಂಭ್ರ ಮದ ವೇದಿಕೆ ತೆರೆದುಕೊಳ್ಳಲಿದೆ.

ದಸರಾ ಮಹೋತ್ಸವದ ಮೊಟ್ಟ ಮೊದಲ ಕಾರ್ಯಕ್ರಮ ಈ ಯುವ ಸಂಭ್ರಮದಲ್ಲಿ ಈವರೆಗೆ ಹಾಡು-ನೃತ್ಯದ ಕಾರಂಜಿ ಮೂಡು ತ್ತಿತ್ತು. ಆದರೆ ಈ ಬಾರಿ ಮೈಮ್ (ಅಣಕು ನಾಟಕ), ಸ್ಕಿಟ್ (ಲಘು ಹಾಸ್ಯ ನಾಟಕ) ಹಾಗೂ ಲಘು ನಾಟಕ ಪ್ರದರ್ಶನಕ್ಕೂ ಅವಕಾಶ ನೀಡಲಾಗಿದೆ. ಮೈಸೂರಿನ ವಾರ್ತಾ ಭವನದಲ್ಲಿ ಸೋಮವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುವ ದಸರಾ ಹಾಗೂ ಯುವ ಸಂಭ್ರಮ ಉಪ ಸಮಿತಿಯ ಉಪ ವಿಶೇಷಾಧಿಕಾರಿಗಳೂ ಆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಈ ಬಾರಿಯ ಯುವ ಸಂಭ್ರಮದಲ್ಲಿ ಮೈಮ್, ಸ್ಕಿಟ್, ನಾಟಕ ಪ್ರದರ್ಶನಕ್ಕೂ ಅವಕಾಶ ನೀಡಲಾಗಿದೆ. ಈ ಎಲ್ಲಾ ರೀತಿಯ ಪ್ರದರ್ಶನಕ್ಕೂ ಎಂಟು ನಿಮಿಷಗಳ ಅವಧಿ ನಿಗದಿ ಮಾಡಲಾಗಿದೆ. ಎಂಟು ದಿನಗಳ ಕಾಲ ನಡೆಯುತ್ತಿದ್ದ ಯುವ ಸಂಭ್ರಮ ಈ ಬಾರಿ 10 ದಿನಗಳಿಗೆ ವಿಸ್ತರಣೆಗೊಂಡಿದ್ದು, ಸೆ.17ರಿಂದ 26ರವರೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಕಳೆಗಟ್ಟಲಿದೆ ಎಂದರು. ಸೆ.17ರಂದು ಸಂಜೆ 5.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಭಾಗ ವಹಿಸುವ ಮೂಲಕ ಕಾರ್ಯಕ್ರಮಕ್ಕೆ ತಾರಾ ಮೆರಗು ನೀಡಲಿದ್ದಾರೆ. ಬಳಿಕ ಮೈಸೂರು ವಿವಿ ಲಲಿತ ಕಲೆ ಕಾಲೇಜು ತಂಡದ ಸ್ವಾಗತ ನೃತ್ಯದೊಂದಿಗೆ ಯುವ ಸಂಭ್ರಮ ಚಾಲನೆ ಪಡೆದುಕೊಳ್ಳಲಿದ್ದು, ಮೊದಲ ದಿನ ಒಟ್ಟು 20 ತಂಡಗಳು ಪ್ರದರ್ಶನ ನೀಡಲಿವೆ. ಕಳೆದ ವರ್ಷ ಒಟ್ಟು 162 ಕಾಲೇಜು ತಂಡಗಳು ಪಾಲ್ಗೊಂಡು ನೃತ್ಯ ಪ್ರದರ್ಶನ ನೀಡಿದ್ದವು. ಈ ಬಾರಿ ಒಟ್ಟು 260 ಕಾಲೇಜು ತಂಡಗಳು ಪ್ರದರ್ಶನ ನೀಡಲಿವೆ ಎಂದರು.

ನಾನಾ ಸಂದೇಶಗಳ ಅನಾವರಣ: ಈ ಬಾರಿ ಹೆಚ್ಚು ಕಾಲೇಜು ತಂಡಗಳು ಪ್ರದ ರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಸಂಜೆ 5.30ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಿ ಸಲೇಬೇಕೆಂದು ತೀರ್ಮಾನಿಸಲಾಗಿದೆ. ರಾಷ್ಟ್ರೀಯ ಭಾವೈಕ್ಯ, ಸ್ವಾತಂತ್ರ್ಯ ಚಳವಳಿ, ಸಾಮಾಜಿಕ ಕಳಕಳಿ, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಉಂಟಾಗಿ ರುವ ದುಷ್ಪರಿಣಾಮ, ಪರಿಸರ ಸಂರಕ್ಷಣೆ, ಹುಲಿ ಸಂರಕ್ಷಣೆ, ಪ್ಲಾಸ್ಟಿಕ್ ನಿರ್ಮೂಲನೆ ಸೇರಿದಂತೆ ನಾನಾ ಥೀಮ್‍ಗಳನ್ನು ಕಾಲೇಜು ತಂಡಗಳಿಗೆ ಈಗಾಗಲೇ ಸಮಿತಿ ನೀಡಿದೆ. ಅದರ ಆಧಾರದಲ್ಲಿ ತಂಡಗಳು ನೃತ್ಯ ಸಂಯೋಜಿಸಿ ಪ್ರದರ್ಶನ ನೀಡಲಿವೆ ಎಂದರು.

ಅತ್ಯುತ್ತಮ ಪ್ರದರ್ಶನ ನೀಡುವ 5ರಿಂದ 6 ತಂಡಗಳನ್ನು ಪ್ರತಿ ದಿನ ಆಯ್ಕೆ ಮಾಡ ಲಾಗುವುದು. ಈ ತಂಡಗಳಿಗೆ ಯುವ ದಸರಾದಲ್ಲಿ ಪ್ರದರ್ಶನ ನೀಡಲು ಅವಕಾಶ ದೊರೆಯಲಿದೆ. ಜಾನಪದ ವಿದ್ವಾಂಸ ಪಿ.ಕೆ.ರಾಜಶೇಖರ್, ಭರತನಾಟ್ಯ ಕಲಾವಿದೆ ಶೀಲಾ ಶ್ರೀಧರ್, ಪಾಶ್ಚಿಮಾತ್ಯ ನೃತ್ಯ ಕಲಾವಿದೆ ಪೂಜಾ ಜೋಷಿ ಹಾಗೂ ರಂಗಾಯಣ ಕಲಾವಿದ ಸಂತೋಷ್ ಕುಮಾರ್ ಕುಸು ನೂರ್ ತೀರ್ಪುಗಾರರಾಗಿ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ ಎಂದರು.

ವೇದಿಕೆಯಲ್ಲಿ ಚೆಕ್ ವಿತರಣೆ: ನೃತ್ಯ ಸಂಯೋಜಕರಿಗೆ ಏಳೂವರೆ ಸಾವಿರ ರೂ. ಗೌರವಧನ ನೀಡಲಾಗುವುದು. ಪ್ರದರ್ಶನ ನೀಡುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರಯಾಣ ದರ, ತಾಲೀಮು ವೆಚ್ಚ ಹಾಗೂ ವಸ್ತ್ರ ವಿನ್ಯಾಸ ವೆಚ್ಚ ಸೇರಿದಂತೆ 500 ರೂ. ಗೌರವಧನ ನೀಡಲಾಗುವುದು ಎಂದರಲ್ಲದೆ, ಯುವ ಸಂಭ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿ ಗಳಿಗೆ ಹಣದ ಚೆಕ್ ಅನ್ನು ವಿಳಂಬವಾಗಿ ನೀಡಲಾಗುತ್ತಿದೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಹಿಂದೆ ಆರ್‍ಟಿಜಿಎಸ್ ಮೂಲಕ ಹಣ ಪಾವತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಖಾತೆ ಸಂಖ್ಯೆಗಳು ತಪ್ಪಾಗಿ ನಮೂದಿಸಿದ್ದರೆ ಹಣ ತಲುಪದೇ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಈ ಬಾರಿ ಕಾಲೇಜು ತಂಡಗಳಿಗೆ ಪ್ರದರ್ಶನ ಮುಗಿಯುತ್ತಿದ್ದಂತೆ ವೇದಿಕೆಯಲ್ಲೇ ಚೆಕ್ ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉತ್ತರ ಕರ್ನಾಟಕದ 100ಕ್ಕೂ ಹೆಚ್ಚು ಕಾಲೇಜು ತಂಡಗಳಿಗೆ ಯುವ ಸಂಭ್ರಮದಲ್ಲಿ ಅವಕಾಶ ನೀಡಲಾಗುವುದು ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದರು. ಆದರೆ ಆ ಭಾಗದ ಒಂದೆರಡು ತಂಡಗಳು ಮಾತ್ರ ಪಾಲ್ಗೊಂಡಿವೆ. ಇದಕ್ಕೆ ಕಾರಣವೇನು? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಬಿ.ರಿಷ್ಯಂತ್, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಲ್ಲಾ ಕಾಲೇಜುಗಳಿಗೆ ಮುಕ್ತ ಅವಕಾಶವಿದೆ. ಆಸಕ್ತಿ ವಹಿಸಿ ಬಂದ ಎಲ್ಲಾ ಕಾಲೇಜುಗಳಿಗೆ ಅವಕಾಶ ನೀಡಲಾಗಿದೆ. ಉತ್ತರ ಕರ್ನಾಟಕದ ಹೆಚ್ಚು ತಂಡಗಳು ಪ್ರದರ್ಶನ ನೀಡಲು ಕೋರಿದ್ದರೆ ಅವಕಾಶ ಕಲ್ಪಿಸಬಹುದಿತ್ತು. ಆದರೆ ಒಂದೆರಡು ಕಾಲೇಜು ತಂಡಗಳು ಮಾತ್ರವೇ ಬಂದಿವೆ ಎಂದರು. ಇದೇ ವೇಳೆ ಯುವ ಸಂಭ್ರಮದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಉಪಸಮಿತಿ ಕಾರ್ಯಾಧ್ಯಕ್ಷ ಡಿ.ಬಿ.ಲಿಂಗ ಣ್ಣಯ್ಯ, ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್ ಗೋಷ್ಠಿಯಲ್ಲಿದ್ದರು.

 

Translate »