ವಿ.ಸೋಮಣ್ಣಗೆ ಮೈಸೂರು-ಕೊಡಗು, ಸುರೇಶ್‍ಕುಮಾರ್‍ಗೆ ಚಾ.ನಗರ, ಆರ್.ಅಶೋಕ್‍ಗೆಮಂಡ್ಯ, ಮಾಧುಸ್ವಾಮಿಗೆ ಹಾಸನ ಉಸ್ತುವಾರಿ
ಮೈಸೂರು

ವಿ.ಸೋಮಣ್ಣಗೆ ಮೈಸೂರು-ಕೊಡಗು, ಸುರೇಶ್‍ಕುಮಾರ್‍ಗೆ ಚಾ.ನಗರ, ಆರ್.ಅಶೋಕ್‍ಗೆಮಂಡ್ಯ, ಮಾಧುಸ್ವಾಮಿಗೆ ಹಾಸನ ಉಸ್ತುವಾರಿ

September 17, 2019

ಬೆಂಗಳೂರು,ಸೆ.16- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಳೆದು-ತೂಗಿ ಅಂತೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ಅವರು, ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನಿಯೋಜನೆ ಮಾಡುವ ವೇಳೆ ರಾಜಕೀಯ ತಂತ್ರ ಗಾರಿಕೆಯನ್ನು ಅನುಸರಿಸಿದ್ದಾರೆ. ಅನರ್ಹ ಶಾಸಕರು ಪ್ರತಿನಿಧಿಸು ತ್ತಿದ್ದ ಜಿಲ್ಲೆಗಳಿಗೆ ಉಸ್ತುವಾರಿ ನೇಮಕ ಮಾಡುವಲ್ಲಿಯೂ ಎಚ್ಚ ರಿಕೆಯ ಹೆಜ್ಜೆ ಇಟ್ಟಿದ್ದಾರೆ. ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸುವ ನಿಟ್ಟಿನಲ್ಲೂ ಪ್ರಯತ್ನ ಪಟ್ಟಿದ್ದಾರೆ.

ಬೆಂಗಳೂರು ಜಿಲ್ಲೆಯ ಉಸ್ತುವಾರಿ ಗಿಟ್ಟಿಸಿಕೊಳ್ಳಲು ಆರ್. ಅಶೋಕ್ ಮತ್ತು ಅಶ್ವತ್ಥ್‍ನಾರಾಯಣ ಅವರ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವನ್ನು ಮುಖ್ಯಮಂತ್ರಿಗಳು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ.

ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳ ಉಸ್ತುವಾರಿಯನ್ನು ಮುಂದಿನ ದಿನಗಳಲ್ಲಿ ಅನರ್ಹ ಶಾಸಕರು ಸಂಪುಟ ಸೇರಿದಂತೆ ಅವರಿಗೆ ನೀಡುವ ದೂರದೃಷ್ಟಿಯಿಂದ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯಾಯ ಜಿಲ್ಲೆಗಳಿಂದ ಶಾಸಕರಾಗಿ ಆಯ್ಕೆಯಾಗಿರುವ ಸಚಿವರನ್ನು ಹೊರತುಪಡಿಸಿ ಬೇರೆಯವರಿಗೆ ಆ ಜಿಲ್ಲೆಗಳನ್ನು ವಹಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಮೀಸಲಿಟ್ಟು, ಆ ಜಿಲ್ಲೆಯಿಂದ ಆಯ್ಕೆಯಾಗಿರುವ ಶ್ರೀರಾಮುಲು ಅವರಿಗೆ ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆ ಗಳನ್ನು ನೀಡಲಾಗಿದೆ. ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲೆಯನ್ನು ಮೀಸಲಿಟ್ಟು, ಆ ಜಿಲ್ಲೆಯವರೇ ಆದ ಲಕ್ಷ್ಮಣ್ ಸವದಿ ಅವರಿಗೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ವಹಿಸಲಾಗಿದೆ. ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಆರ್. ಅಶೋಕ್ ಅವರಿಗೆ ಜೆಡಿಎಸ್‍ನ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯನ್ನು ನೀಡಿ ಅವರಿಗೆ ಸತ್ವ ಪರೀಕ್ಷೆ ಒಡ್ಡಲಾಗಿದೆ. ಅದರ ಜೊತೆಗೆ ಬೆಂಗಳೂರು ಗ್ರಾಮಾಂ ತರ ಜಿಲ್ಲೆಯನ್ನೂ ಅಶೋಕ್ ಅವರಿಗೆ ನೀಡಲಾಗಿದೆ. ಹೆಚ್.ಡಿ. ರೇವಣ್ಣ ಅವರಿಗೆ ಸೆಡ್ಡು ಹೊಡೆಯುವಂತೆ ಹಾಸನ ಜಿಲ್ಲೆ ಉಸ್ತುವಾರಿಯನ್ನು ಜೆ.ಸಿ.ಮಾಧುಸ್ವಾಮಿ ಅವರಿಗೆ ವಹಿಸಲಾಗಿದೆ. ಅದರ ಜೊತೆಗೆ ತುಮಕೂರು ಜಿಲ್ಲೆಯನ್ನೂ ಕೂಡ ಜೆ.ಸಿ.ಮಾಧುಸ್ವಾಮಿ ಅವರಿಗೆ ನೀಡಲಾಗಿದೆ.

Translate »