ಮೈಸೂರು: ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರ್ವಾಧಿಕಾಯಂತೆ ವರ್ತಿಸುತ್ತಿದ್ದಾರೆ ಎಂದು ಖಂಡಿಸಿ, ಜೊತೆಗೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‍ನ ಕಾರ್ಯಕರ್ತೆಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆ ಕೆಲಸಗಳ ಬಗ್ಗೆ ಅಸಡ್ಡೆ ಧೋರಣೆ ಅನುಸರಿಸುತ್ತಿದ್ದಾರೆ. ಇದರ ಫಲವಾಗಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರಿಗೆ ಸಲ್ಲಬೇಕಾದ ಹಲವಾರು ಸೌಲಭ್ಯಗಳನ್ನು ವಂಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಎತ್ತರದ ಧ್ವನಿಯಲ್ಲಿ ಗದರಿಸಿ ಕಾರ್ಯಕರ್ತೆಯರು ನೆಮ್ಮದಿಯಿಂದ ಕೆಲಸ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದರು. ತಕ್ಷಣ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಮಾತೃಪೂರ್ಣ ಯೋಜನೆಯ ತರಕಾರಿ, ಮೊಟ್ಟೆಗೆ 4 ತಿಂಗಳಿಂದ ಹಣ ಪಾವತಿಸಿಲ್ಲ. ದೂರು ಸಮಿತಿ ರಚಿಸಬೇಕು. 2016ರಲ್ಲಿ ನಡೆದ 12 ದಿನಗಳ ಮುಷ್ಕರ ಅವಧಿಯ ಹಣ ಪಾವತಿಸಬೇಕು. ದಾಖಲಾತಿ ಪುಸ್ತಕ ಒದಗಿಸಬೇಕು. ಖಾಲಿ ಚೀಲಗಳನ್ನು ಇಲಾಖೆಯವರೇ ತೆಗೆದುಕೊಂಡು ಹೋಗಬೇಕು. ಪ್ರತಿ ತಿಂಗಳು 5ರಂದೇ ಸಂಬಳ ನೀಡಬೇಕು. ತಿಂಗಳ ಸಾದಿಲ್ವಾರ್ ಹಣವನ್ನು ತಿಂಗಳಿಗೆ ರೂ.50ರಿಂದ 84ಕ್ಕೆ ಹೆಚ್ಚಿಸಬೇಕು. ಜಂಟಿ ಖಾತೆ ಯೋಜನೆ ರದ್ದುಪಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ರಾಜ್ಯಮಂಡಳಿ ಸದಸ್ಯ ಡಿ.ಜಗನ್ನಾಥ್, ಅಧ್ಯಕ್ಷ ಭ್ರಮರಾಂಬಿಕಾ, ಬಿ.ಆಶಾಬಾಯಿ, ಫರ್ಜಾನಾ, ಮಹದೇವಮ್ಮ, ಮಂಜುಳಾ ಇನ್ನಿತರರು ಪಾಲ್ಗೊಂಡಿದ್ದರು.