ಅನ್ನಭಾಗ್ಯ ಅಕ್ಕಿ 5 ಕೆಜಿಗೆ ಸೀಮಿತ
ಮೈಸೂರು

ಅನ್ನಭಾಗ್ಯ ಅಕ್ಕಿ 5 ಕೆಜಿಗೆ ಸೀಮಿತ

July 17, 2018
  • ಇದರ ಜೊತೆಗೆ ಬೇಳೆ ನೀಡಲು ತೀರ್ಮಾನ
  • ರಾಹುಲ್ ಗಾಂಧಿಗೆ ಇದರ ಬಗ್ಗೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ದೆಹಲಿಗೆ

ಬೆಂಗಳೂರು:  ಅನ್ನಭಾಗ್ಯ ಯೋಜನೆಯಡಿ ಪ್ರತಿ ಯೂನಿಟ್ ಅಕ್ಕಿ ಪ್ರಮಾಣ ಹೆಚ್ಚು ಮಾಡದಿರಲು ಸರ್ಕಾರ ತೀರ್ಮಾನಿಸಿದೆ.

ಪ್ರಸ್ತುತ ಪ್ರತಿ ಯೂನಿಟ್‍ಗೆ 5 ಕೆ.ಜಿ. ಅಕ್ಕಿ ನೀಡುತ್ತಿದ್ದು, ಅದನ್ನೇ ಮುಂದುವರೆಸಿ, ಬಡ ಕುಟುಂಬಕ್ಕೆ ಪೌಷ್ಟಿಕತೆಗೆ ಅಗತ್ಯ ವಾದ ಬೇಳೆಕಾಳು ನೀಡಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಅವರ ಈ ನಿರ್ಧಾರ ಕಾಂಗ್ರೆಸ್ ಎನ್ನುವುದಕ್ಕಿಂತ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಅಸಮಾಧಾನ ತಂದಂತಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸಂಸತ್ ಅಧಿವೇಶನಕ್ಕೂ ಮುನ್ನ ನಾಳೆ ಸಂಜೆ ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದ ರೊಂದಿಗೆ ಸಮಾಲೋಚನೆ ನಡೆಸಲು ಕುಮಾರಸ್ವಾಮಿ ದೆಹಲಿಗೆ ತೆರಳುತ್ತಿದ್ದಾರೆ.

ಈ ಸಂದರ್ಭದಲ್ಲಿ ರಾಹುಲ್ ಅವರ ಭೇಟಿಗೆ ಇಚ್ಛಿಸಿದ್ದು, ಅವರು ಸಮಯ ನೀಡಿದರೆ, ರೈತರ ಕೃಷಿ ಸಾಲ ಮನ್ನಾ, ಬಜೆಟ್‍ನಲ್ಲಿ ಪ್ರಕಟಿಸಿರುವ ಅಂಶಗಳ ಜೊತೆಗೆ ಸಿದ್ದರಾಮಯ್ಯ ಅವರ ಸರಣಿ ಪತ್ರಗಳ ಬಗ್ಗೆಯೂ ಮುಖ್ಯವಾಗಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಮುಖ್ಯವಾಗಿ ಅನ್ನಭಾಗ್ಯ ಯೋಜನೆ ಅಡಿ ನೀಡಲಾಗುತ್ತಿರುವ ಅಕ್ಕಿ ದುರುಪಯೋಗವಾಗುತ್ತಿದ್ದು, ಕುಟುಂಬಕ್ಕೆ ನೀಡಲಾಗುತ್ತಿರುವ ಹೆಚ್ಚುವರಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಹಿಂದಿನ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ತಂದು ಬಡವರಿಗೆ ಆಸರೆಯಾಗಿದೆ. ಪ್ರಸ್ತುತ ಪ್ರತಿ ಯೂನಿಟ್‍ಗೆ 5 ಕೆ.ಜಿ. ನೀಡಲಾಗುತ್ತಿದೆ. ಇದು ಕೆಲವು ಕುಟುಂಬಗಳಲ್ಲಿ ಹೆಚ್ಚು ಮಂದಿ ಇದ್ದರೆ ಅಂತಹ ಕುಟುಂಬಗಳಿಗೆ ಮೂಟೆ ಗಟ್ಟಲೆ ಅಕ್ಕಿ ಹೋಗುತ್ತಿದೆ. ಹೆಚ್ಚಿನ ಅಕ್ಕಿಯನ್ನು ಆ ಕುಟುಂಬಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಈಗ ಮತ್ತೆ
ಯೂನಿಟ್‍ಗೆ 7 ಕೆ.ಜಿ. ಹೆಚ್ಚಿಸಿದರೆ, ಅಂತಹ ಕುಟುಂಬಗಳು ಸರ್ಕಾರದಿಂದ ಉಚಿತವಾಗಿ ಪಡೆದು ಮಾರುಕಟ್ಟೆಯಲ್ಲಿ ಮಾರಿ ಹಣ ಪಡೆಯುತ್ತಾರೆ. ಇದರ ಬದಲು ಯಥಾಸ್ಥಿತಿ ಮುಂದುವರೆಸಿ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರ ಒದಗಿಸಲು ತೀರ್ಮಾನಿಸಿದ್ದೇನೆ. ಇದಕ್ಕೆ ನಿಮ್ಮ ಅನುಮತಿ ಬೇಕಾಗಿದೆ. ಏಳು ಕೆ.ಜಿ.ಗೆ ಅಕ್ಕಿ ಹೆಚ್ಚಳ ಮಾಡುವುದರಿಂದ ಬೊಕ್ಕಸಕ್ಕೆ ವಾರ್ಷಿಕ 2,500 ಕೋಟಿ ರೂ. ಹೊರೆ ಬೀಳಲಿದೆ. ಆದರೆ ಸಿದ್ದರಾಮಯ್ಯ ಅವರು ಕೇವಲ ಒಂದು ಸಾವಿರ ಕೋಟಿ ರೂ. ಮಾತ್ರ ಮೀಸಲಿಟ್ಟಿದ್ದಾರೆ. ನಿಮ್ಮ ಚಿಂತನೆಯಂತೆ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಧಾವಿಸಿರುವ ಮೈತ್ರಿ ಸರ್ಕಾರ, ಹಣಕಾಸು ಸಂಸ್ಥೆಗಳಿಂದ ಪಡೆದಿರುವ 44,700 ಕೋಟಿ ರೂ. ಮನ್ನಾ ಮಾಡಿದ್ದೇವೆ. ಇದು ಸರ್ಕಾರದ ಬೊಕ್ಕಸದ ಮೇಲೆ ಭಾರೀ ಹೊರೆ ಬಿದ್ದಿದೆ. ಇಂತಹ ಸನ್ನಿವೇಶದಲ್ಲಿ ಉಳಿದ ಯೋಜನೆಗಳಿಗೆ ಪ್ರಸಕ್ತ ವರ್ಷಕ್ಕೆ ಸೀಮಿತವಾಗಿ ಅನುದಾನ ಕ್ರೋಢೀಕರಿಸಲು ಮಿತವ್ಯಯಕ್ಕೆ ಮುಂದಾಗಬೇಕಾಗುತ್ತದೆ ಎನ್ನಲಿದ್ದಾರೆ.

ರಾಹುಲ್ ಭೇಟಿ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪತ್ರಗಳ ಬಗ್ಗೆಯೂ ಚರ್ಚೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ತಿಳಿಸಿವೆ. ಅನ್ನಭಾಗ್ಯ ಯೋಜನೆಯಡಿ 5ರ ಬದಲು 7 ಕೆ.ಜಿ.ಗೆ ಹೆಚ್ಚಳ ಮಾಡಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಪ್ರಕಟಿಸಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರ ರಚನೆಗೊಂಡ ನಂತರ ಹಿಂದಿನ ಸರ್ಕಾರದ ಮುಂಗಡಪತ್ರದಲ್ಲಿ ಪ್ರಕಟಿಸಿದ್ದ ಯೋಜನೆಗಳನ್ನು ಮುಂದುವರೆ ಸುವುದಾಗಿ ಕುಮಾರಸ್ವಾಮಿ, ವಿಧಾನಸಭೆಯಲ್ಲಿ ಮತ್ತು ಹೊರಗೆ ಭರವಸೆ ನೀಡಿದ್ದರು. ಕುಮಾರಸ್ವಾಮಿ ತಮ್ಮ ಚೊಚ್ಚಲ ಮುಂಗಡಪತ್ರ ಮಂಡನೆ ನಂತರ ಸಿದ್ದರಾಮಯ್ಯ, ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು, ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಿಸಬೇಡಿ, ಅನ್ನಭಾಗ್ಯ ಯೋಜನೆಯಡಿ ತಾವು ಕೈಗೊಂಡಿರುವಂತೆ ಪ್ರತಿ ಯೂನಿಟ್‍ಗೆ 7 ಕೆ.ಜಿ. ಯಂತೆ ಅಕ್ಕಿ ಹೆಚ್ಚಿಸಿ ಎಂದು ಸಲಹೆ ನೀಡಿದ್ದರು. ಆದರೆ ಸಿಎಂ ಅವರು ತೈಲ ತೆರಿಗೆ ಇಳಿಸಲಿಲ್ಲ, ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣದ ಬಗ್ಗೆಯೂ ನಿಖರವಾಗಿ ತಿಳಿಸಲಿಲ್ಲ.

 

Translate »