ಪೊಲೀಸ್ ಠಾಣೆ, ವಸತಿ ಗೃಹ ನಿರ್ಮಾಣಕ್ಕೆ ಇನ್ಫೋಸಿಸ್ ನೆರವು
ಮೈಸೂರು

ಪೊಲೀಸ್ ಠಾಣೆ, ವಸತಿ ಗೃಹ ನಿರ್ಮಾಣಕ್ಕೆ ಇನ್ಫೋಸಿಸ್ ನೆರವು

July 17, 2018

ಬೆಂಗಳೂರು: ಅಗತ್ಯವಿರುವ ಪೊಲೀಸ್ ಠಾಣೆ ಹಾಗೂ ವಸತಿ ಗೃಹಗಳನ್ನು ನಿರ್ಮಿಸಿಕೊಡಲು ಇನ್ಫೋಸಿಸ್ ಸಂಸ್ಥೆ ಮುಂದಾಗಿದೆ.

ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ, ಗೃಹ ಇಲಾಖೆ ಹೊಣೆ ಹೊತ್ತ ಡಾ. ಜಿ. ಪರಮೇಶ್ವರ್ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೂ ತಮ್ಮ ಪ್ರತಿಷ್ಠಾನದಿಂದ ಕೊಡುಗೆ ನೀಡಲು ಸಮ್ಮತಿಸಿದ್ದಾರೆ.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ, ರಾಜ್ಯಾದ್ಯಂತ 11,000 ಪೊಲೀಸ್ ವಸತಿ ಗೃಹ ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಈಗಾಗಲೇ 7,000 ವಸತಿ ಗೃಹಗಳು ನಿರ್ಮಾಣದ ಅಂತಿಮ ಹಂತದಲ್ಲಿವೆ. ಇಷ್ಟಾದರೂ ವಸತಿ ಗೃಹ ಗಳು ಸಾಕಾಗುತ್ತಿಲ್ಲ, ಸರ್ಕಾರ ನಿರ್ಮಿ ಸುವ ಜೊತೆಗೆ ಖಾಸಗಿ ಸಹಭಾಗಿತ್ವ ಪಡೆಯಲು ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಪೊಲೀಸ್ ಠಾಣೆ ಹಾಗೂ ವಸತಿ ಗೃಹಗಳನ್ನು ನಿರ್ಮಿಸಲು ಇನ್ಫೋಸಿಸ್ ಸಂಸ್ಥೆ ಮೌಖಿಕವಾಗಿ ಸಮ್ಮತಿಸಿದೆ ಎಂದರು. ಪೊಲೀಸರು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಅವರಿಗೆ ಮನೆ ಕಟ್ಟಿಕೊಡಲು ನಾವು ಸಿದ್ಧರಿದ್ದೇವೆ. ನೀವು ಜಾಗ ಕೊಡಿ ಎಂದು ಸುಧಾಮೂರ್ತಿ ಹೇಳಿದ್ದಾರೆ. ಹಾಗೆಯೇ ಹೊಸ ಪೊಲೀಸ್ ಠಾಣಾ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಜಾಗದ ವ್ಯವಸ್ಥೆ ಸರ್ಕಾರ ಮಾಡಲಿದೆ ಎಂದು ಅವರು ಹೇಳಿದರು.

ನಮ್ಮ ಮೆಟ್ರೋಗೆ ಇನ್ಫೋಸಿಸ್ ನೆರವು ನೀಡಲಿದೆ, ಕೊನೆನಾ ಅಗ್ರಹಾರದಲ್ಲಿ ಮೆಟ್ರೋ ಸ್ಟೇಷನ್ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದೆ. ಈ ಸಂಬಂಧ ಇದೇ ತಿಂಗಳ 19 ರಂದು ಮೆಟ್ರೋ ಜತೆ ಒಡಂಬಡಿಕೆಗೆ ಸಹಿ ಹಾಕಲಾಗುತ್ತದೆ. ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲು ಸುಧಾಮೂರ್ತಿ ಬಂದಿದ್ದರು ಎಂದರು. ಮೆಟ್ರೋಗೆ ಸುಮಾರು 150 ಕೋಟಿ ರೂ. ನೆರವು ನೀಡುತ್ತಿರುವ ಸುಧಾಮೂರ್ತಿ ಅವರಿಗೆ ಅಭಿನಂದನೆ ಹೇಳಿದ ಡಾ.ಜಿ. ಪರಮೇಶ್ವರ್, ಪೊಲೀಸರ ಮನೆ ಮತ್ತು ಹೊಸ ಪೊಲೀಸ್ ಠಾಣೆ ಕಟ್ಟಡಕ್ಕೆ ನೆರವು ಪಡೆಯಲು ಅಗತ್ಯ ರೂಪರೇಷೆ ಸಿದ್ಧಪಡಿ ಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಪ್ರಗತಿಯಲ್ಲಿರುವ ನಮ್ಮ ಮೆಟ್ರೋದ ಎಲ್ಲ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುವಂತೆ ಬೆಂಗಳೂರು ಮೆಟ್ರೋ ರೈಲು ಅಭಿವೃದ್ಧಿ ನಿಗಮಕ್ಕೆ ಆದೇಶಿಸಿರುವುದಾಗಿ ತಿಳಿಸಿದರು. ಮೆಟ್ರೋ ಕೆಳಗಿನ ರಸ್ತೆಗಳ ನಿರ್ವಹಣೆ ಆಗುತ್ತಿಲ್ಲ. ಈ ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಗುತ್ತಿಗೆದಾರ ರಿಂದಲೇ ರಸ್ತೆ ನಿರ್ಮಾಣ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

Translate »