ವಿದೇಶಿ ವಿದ್ಯಾರ್ಥಿ ಬಂಧನ; ಮಾದಕ ವಸ್ತು ವಶ
ಮೈಸೂರು

ವಿದೇಶಿ ವಿದ್ಯಾರ್ಥಿ ಬಂಧನ; ಮಾದಕ ವಸ್ತು ವಶ

July 30, 2018

ಮೈಸೂರು:  ಮಾದಕ ವಸ್ತು ಹೊಂದಿದ್ದ ವಿದೇಶಿ ಪ್ರಜೆಯೊಬ್ಬನನ್ನು ಮೈಸೂರಿನ ಲಷ್ಕರ್ ಠಾಣೆಯ ಪೊಲೀಸರು ಬಂಧಿಸಿ, 7 ಕೆಜಿ 592 ಗ್ರಾಂ ಖಾಟಾ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಯೆಮನ್ ದೇಶದ ಪ್ರಜೆ ಹಮ್ಜಾ ಅಬ್ದೊ ಖಾಸಿಂ ಅಬ್ದುಲ್ಲಾ (23) ಎಂಬಾತನೇ ಬಂಧಿತನಾಗಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೈಸೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾದ ಈತ, ಶನಿವಾರ ಮೈಸೂರಿನ ಕೆಎಸ್ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿಯ ಪಾರ್ಸಲ್ ಕಚೇರಿಯಲ್ಲಿ ಗಲಾಟೆ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನ ಬಳಿಯಿದ್ದ ರಟ್ಟಿನ ಬಾಕ್ಸ್ ಪರಿಶೀಲಿಸಿದ ಪೊಲೀಸರಿಗೆ 4 ಪ್ಲಾಸ್ಟಿಕ್ ಕವರ್‍ನಲ್ಲಿ ಹಸಿರು ಮತ್ತು ಕಂದು ಬಣ್ಣದ ಒಣಗಿದ ಸೊಪ್ಪು ಕಂಡು ಬಂದಿದ್ದು, ಮಾದಕ ವಸ್ತುವಿನ ಘಾಟು ಬಂದಿದೆ. ಈ ಬಗ್ಗೆ ಹಮ್ಜಾನನ್ನು ಪೊಲೀಸರು ವಿಚಾರಿಸಿ ದಾಗ ಖಾಟಾ ಎಂಬ ಮಾದಕ ವಸ್ತು ಎಂದು ಬಾಯಿಬಿಟ್ಟಿದ್ದಾನೆ.

ಬಳಿಕ ಹಮ್ಜಾನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ತನ್ನ ಸ್ನೇಹಿತ ಮೈಸೂರಿನ ಇಬ್ರಾಹಿಂ ಎಂಬಾತನು ಈ ರಟ್ಟಿನ ಬಾಕ್ಸನ್ನು ಮುಂಬೈಯಲ್ಲಿರುವ ಯೂಸೆಫ್ ಎಂಬಾತನಿಗೆ ಕಳುಹಿಸಲು ಕೊಟ್ಟಿರುವುದಾಗಿ ತಿಳಿಸಿದ್ದಾನೆ. ಹಮ್ಜಾನನ್ನು ಬಂಧಿಸಿರುವ ಪೊಲೀಸರು, ಮತ್ತೊಬ್ಬ ಆರೋಪಿ ಇಬ್ರಾಹಿಂಗಾಗಿ ಶೋಧ ಮುಂದುವರೆಸಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಷ್ಕರ್ ಠಾಣೆಯ ಇನ್ಸ್‍ಪೆಕ್ಟರ್ ಹೆಚ್.ಆರ್.ವಿವೇಕಾನಂದ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

Translate »