ಹುಲಿ ಸಂತತಿ ರಕ್ಷಿಸಿದರೆ ಇಡೀ ಪರಿಸರ ಕಾಪಾಡಿದಂತೆ
ಮೈಸೂರು

ಹುಲಿ ಸಂತತಿ ರಕ್ಷಿಸಿದರೆ ಇಡೀ ಪರಿಸರ ಕಾಪಾಡಿದಂತೆ

July 30, 2018

ಮೈಸೂರು: ಅಳಿವಿನಂಚಿನಲ್ಲಿರುವ ಹುಲಿ ಸಂತತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವುದಕ್ಕೆ ಎಲ್ಲರೂ ಕೈಜೋಡಿಸಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅರಣ್ಯ ಇಲಾಖೆ ನಿವೃತ್ತ ಹಿರಿಯ ಅಧಿಕಾರಿ ಪಿ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಮೃಗಾಲಯದ ಆವರಣದಲ್ಲಿರುವ ಆ್ಯಂಪಿಥೇಟರ್‍ನಲ್ಲಿ ಭಾನುವಾರ ಆಯೋಜಿಸಲಾಗಿದ್ದ `ವಿಶ್ವ ಹುಲಿ ದಿನ’ದ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶೇಷ ಉಪನ್ಯಾಸ ನೀಡಿದ ಅವರು, ಪರಿಸರ ವ್ಯವಸ್ಥೆಯಲ್ಲಿ ಹುಲಿಗಳು ಅಪರೂಪದ ಪ್ರಾಣಿಗಳಾಗಿದ್ದು, ಮುಂಜೂಣಿ ಸ್ಥಾನದಲ್ಲಿವೆ. ಆದರೆ ಬೇಟೆಗಾರರ ಹಾವಳಿ ಸೇರಿದಂತೆ ವಿವಿಧ ಕಾರಣಗಳಿಂದ ಹುಲಿಗಳ ಸಂತತಿ ಅವನತಿಯತ್ತ ಸಾಗುತ್ತಿದೆ. ದೇಶದಲ್ಲಿ ಪ್ರಸ್ತುತವಿರುವ 16 ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿಗಳಲ್ಲಿ ಹುಲಿ ದೊಡ್ಡ ಪ್ರಾಣಿಯಾಗಿದೆ. ಈ ಹಿನ್ನೆಲೆಯಲ್ಲಿ ಹುಲಿ ಸಂತತಿಯನ್ನು ರಕ್ಷಿಸಿದರೆ ಇಡೀ ಪರಿಸರವನ್ನು ಕಾಪಾಡಿದಂತಾಗುತ್ತದೆ ಎಂದು ಹೇಳಿದರು.

ಸರಿ ಸುಮಾರು ಒಂದು ಶತಮಾನದ ಹಿಂದೆ ಅರಣ್ಯ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹುಲಿಗಳಿದ್ದವು. ಆದರೆ ಪ್ರಸ್ತುತ ಸಂದರ್ಭದಲ್ಲಿ 3500 ಹುಲಿಗಳಿವೆ. ಗಣನೀಯ ಪ್ರಮಾಣದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸಿದೆ. ಈ ಹಿಂದೆ ರಾಜರು ಕ್ರೀಡೆಗಾಗಿ ಹುಲಿಗಳನ್ನು ಬೇಟೆಯಾಡುತ್ತಿದ್ದರು. ಬ್ರಿಟಿಷರ ಆಡಳಿತದ ಅವಧಿಯಲ್ಲಿ ದೇಶದ ಅರಣ್ಯ ವ್ಯಾಪ್ತಿ ಕ್ಷೀಣಿಸಿತು. ಇದೇ ಅವಧಿಯಲ್ಲಿ ಹುಲಿಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಯಿತು. ಹುಲಿಗಳ ಸಂತತಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದನ್ನು ಮನಗಂಡು 1970ರ ದಶಕದಲ್ಲಿ ಹುಲಿಗಳ ರಕ್ಷಣೆಗೆ ಆದ್ಯತೆ ನೀಡಲಾಯಿತು. ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಗಮನಕ್ಕೆ ತಂದು ಹುಲಿಗಳ ಸಂರಕ್ಷಣೆಗಾಗಿಯೇ ಕಾರ್ಯಕ್ರಮ ರೂಪಿಸಲಾಯಿತು. ಆ ಮೂಲಕ ಒಂಬತ್ತು ಅರಣ್ಯ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. ಇದೀಗ ದೇಶದಲ್ಲಿ 50 ಅರಣ್ಯ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಅಕ್ರಮ ವ್ಯಾಪಾರಕ್ಕಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹುಲಿ ಬೇಟೆಯಾಡುವವರ ಸಂಖ್ಯೆಯೂ ಹೆಚ್ಚಾಗತೊಡಗಿತು. ಇದರಿಂದಾಗಿ ರಾಜಸ್ಥಾನದ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದ ಮೇಲೆ ದುಷ್ಪರಿಣಾಮ ಬೀರಿತು. ಇದರಿಂದ ಬೇಟೆಗಾರರ ಹಾವಳಿ ತಡೆಗಟ್ಟಿ, ಹುಲಿಗಳನ್ನು ರಕ್ಷಿಸುವುದಕ್ಕಾಗಿ ಟೈಗರ್ ಟಾಸ್ಕ್ ಫೋರ್ಸ್ ರಚಿಸಲಾಯಿತು ಎಂದು ಅವರು ತಿಳಿಸಿದರು.

ಕಳೆದ ಕೆಲ ವರ್ಷಗಳಿಂದ ಅರಣ್ಯ ಪ್ರದೇಶ ಸಮೀಪದ ಗ್ರಾಮ ಹಾಗೂ ಹಾಡಿಗಳ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹುಲಿ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ದೇಶದ ವಿವಿಧ ಅರಣ್ಯ ಪ್ರದೇಶದಲ್ಲಿ ಎರಡು ವಿಧದಲ್ಲಿ ಹುಲಿ ಗಣತಿ ನಡೆಸಲಾಗುತ್ತದೆ. ಪ್ರತಿ ವರ್ಷ ನಮ್ಮ ಕರ್ನಾಟಕದಲ್ಲಿ ಗಣತಿ ನಡೆಸಿದರೆ, ಪ್ರತಿ ನಾಲ್ಕು ವರ್ಷಕ್ಕೊಮ್ಮೆ ರಾಷ್ಟ್ರ ಮಟ್ಟದಲ್ಲಿ ಗಣತಿ ನಡೆಸಲಾಗುತ್ತದೆ. 2006ರಲ್ಲಿ ನಡೆಸಿದ ಗಣತಿಯಲ್ಲಿ ನಮ್ಮ ದೇಶದಲ್ಲಿ 1411 ಹುಲಿಗಳಿರುವುದು ಕಂಡು ಬಂದಿತ್ತು. 2010 ರಲ್ಲಿ 1706 ಹಾಗೂ 2014 ರಲ್ಲಿ 2226 ಹುಲಿಗಳಿರುವುದು ತಿಳಿದುಬಂದಿತ್ತು. ದುರದೃಷ್ಟವಶಾತ್ ಹುಲಿ ಸಂಖ್ಯೆಯು ಹೆಚ್ಚಾದರೂ ಅವುಗಳ ಆವಾಸ ಸ್ಥಾನವು ಪ್ರಮಾಣಾನುಗುಣವಾಗಿ ಅರಣ್ಯ ಪ್ರದೇಶದ ಲಭ್ಯಯಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯವೆಂದು ಘೋಷಣೆ ಮಾಡಿ ವನ್ಯಜೀವಿಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಇದುವರೆಗೆ ಹುಲಿ ಸಂರಕ್ಷಿತ ಪ್ರದೇಶದಿಂದ 11,188 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ 40,000 ಕುಟುಂಬಗಳು ದೇಶದಾದ್ಯಂತ ಹುಲಿ ಮೀಸಲು ಪ್ರದೇಶದಲ್ಲಿವೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಹುಲಿ ಸಂರಕ್ಷಿಸಿದರೆ ಅರಣ್ಯ ಸಂಪತ್ತನ್ನು ಸಂರಕ್ಷಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಿ ವನ್ಯ ಸಂಪತ್ತಿನ ರಕ್ಷಣೆಗೆ ಶ್ರಮಿಸಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಅನಾಮಾರ್ಫಿಟ್ ಕಲಾವಿದ ಅನಿಲ್‍ಕುಮಾರ್ ಭೋಗಶೆಟ್ಟಿ ಅವರು ಮೃಗಾಲಯದ ಮುಂಭಾಗದ ತ್ರಿಡಿ ಚಿತ್ರ ರಚಿಸಿದ್ದರು. ಇದು ಆಕರ್ಷಕವಾಗಿತ್ತು. ಇದೇ ವೇಳೆ ಮೃಗಾಲಯದಲ್ಲಿರುವ 8 ಹುಲಿಗಳ ಪಾಲಕರಾದ ಮಹೇಶ್, ಸಂಜೀವ, ಮಹದೇವ, ಪ್ರಕಾಶ್, ಸಂದೀಪ್ ಮತ್ತು ಭಾಸ್ಕರ್ ಅವರನ್ನು ಮೃಗಾಲಯದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಪಿಸಿಸಿಎಫ್ ವಿಜಯ್ ಕುಮಾರ್ ಗೋಗಿ, ಎಪಿಸಿಸಿಎಫ್ ಮತ್ತು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯದ ಕಾರ್ಯನಿರ್ವಾಹಕ ಕಾರ್ಯದರ್ಶಿ ಅಜಿತ್ ಎಂ.ಕುಲಕರ್ಣಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »