ರವಿರಂಗ ಶಾಲೆಯ ವಾರಾಂತ್ಯ ತರಬೇತಿಗೆ ಜೂ.10ರಂದು ಆಡಿಷನ್
ಮೈಸೂರು

ರವಿರಂಗ ಶಾಲೆಯ ವಾರಾಂತ್ಯ ತರಬೇತಿಗೆ ಜೂ.10ರಂದು ಆಡಿಷನ್

June 8, 2018

ಮೈಸೂರು: ಅಪ್ರವರಂಭೆ ವತಿಯಿಂದ ಆರಂಭಿಸುತ್ತಿರುವ ರವಿರಂಗ ಶಾಲೆಯ ವಾರಾಂತ್ಯ ತರಬೇತಿಗೆ ಜೂ.10ರಂದು ಆಡಿಷನ್ ನಡೆಸಲಾಗು ವುದು ಎಂದು ಅಪ್ರವರಂಬೆಯ ಕಾರ್ಯದರ್ಶಿ ನಾ.ನಾಗಚಂದ್ರ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ರಂಗತರಬೇತಿ, ನಾಟಕೋತ್ಸವ, ವಿಚಾರಸಂಕಿರಣ, ಮಕ್ಕಳ ನಾಟಕೋತ್ಸವ, ರಂಗಕರ್ಮಿಗಳ ಸನ್ಮಾನ ಸೇರಿದಂತೆ ರಂಗಭೂಮಿಗೆ ತನ್ನದೇ ಸೇವೆ ಸಲ್ಲಿಸುತ್ತಿರುವ ಅಪ್ರವರಂಭೆ ಸಂಸ್ಥೆ ಈಗ ರವಿರಂಗ ವಾರಾಂತ್ಯ ರಂಗಶಾಲೆ ಶಿಬಿರವನ್ನು ಆರಂಭಿಸುತ್ತಿದೆ. ರಾಮಕೃಷ್ಣ ನಗರದ ಇ ಮತ್ತು ಎಫ್ ಬ್ಲಾಕ್‍ನಲ್ಲಿರುವ ನೃಪತುಂಗ ಕನ್ನಡ ಶಾಲೆಯಲ್ಲಿ ಅಡಿಷನ್ ನಡೆಯುವುದು ಎಂದು ತಿಳಿಸಿದರು.

ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವ 10 ವರ್ಷದಿಂದ 15ರೊಳಗಿನ ವಯೋಮಿತಿಯ ಮಕ್ಕಳು ಅಂದು ಬೆಳಗ್ಗೆ 10.30ಕ್ಕೆ ಹಾಜರಿದ್ದು, ಅಡಿಷನ್‍ನಲ್ಲಿ ಪಾಲ್ಗೊಳ್ಳಬಹುದು. ಜೂ.17ರಿಂದ 2019ರ ಜನವರಿವರೆಗೂ ಪ್ರತಿ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ನುರಿತ ರಂಗತಜ್ಞರಿಂದ ಭಾಷಾ ಕಲಿಕೆ, ಸ್ಪಷ್ಟ ಉಚ್ಛಾರಣೆ, ಹಾಡು-ನೃತ್ಯ, ಚಿತ್ರಕಲೆ, ಕಥೆ ಹೇಳುವುದು, ಮುಖವಾಡ ತಯಾರಿಕೆ ತರಬೇತಿ ನೀಡಲಾಗುವುದು. ಸುಮಾರು 20 ರಿಂದ 25 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಮಾಹಿತಿಗೆ ಮೊ.ನಂ. 9743621655, 9632841700 ಅನ್ನು ಸಂಪರ್ಕಿಸಬಹುದು ಎಂದರು. ಪಾಲಿಕೆ ಸದಸ್ಯ ಹಾಗೂ ಸಂಸ್ಥೆ ಉಪಾಧ್ಯಕ್ಷ ಮಾ.ವಿ.ರಾಮಪ್ರಸಾದ್, ಖಜಾಂಚಿ ಜಗದೀಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »