ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ
ಮೈಸೂರು

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ

June 25, 2018

ಮೈಸೂರು:  ಹಿರಿಯ ಪ್ರಾಥಮಿಕ, ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ಹಲವು ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅಭಿನಂದಿಸಲಾಯಿತು.

ಮೈಸೂರಿನ ಅಗ್ರಹಾರದ ಶ್ರೀಕಾಂತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನುಭವ ಟ್ಯುಟೋರಿಯಲ್ಸ್, ಸರ್.ಎಂವಿ ವಿಚಾರ ವೇದಿಕೆ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

7ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ಶ್ರೀಕಾಂತ ಹಿರಿಯ ಪ್ರಾಥಮಿಕ ಶಾಲೆಯ ಎಂ.ಆರ್.ಮದನ್‍ಕುಮಾರ್, ಯು.ಚಂದ್ರಕಲಾ, ಎಸ್.ಚಿತ್ರ, ಆರ್.ವಿನಯ್ ಅವರಿಗೆ `ಅನುಭವ ಚಿಗುರು’, ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕಗಳಿಸಿದ ಗೋಪಾಲಸ್ವಾಮಿ ಶಾಲೆಯ ಆರ್.ಆಶಾ, ಎಸ್.ನಿವೇದಿತಾ, ಎಸ್.ಜ್ಯೋತಿಪ್ರಿಯಾ ಅವರಿಗೆ `ಅನುಭವ ಗಿರಿ’ ಪ್ರಶಸ್ತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ನಿಖಿತಾ ಎಸ್.ರಾವ್, ಎಸ್.ಸೌಗಂಧಿನಿ, ಸ್ಕಂದ ವಿ.ಜೋಯಿಸ್ ಅವರಿಗೆ `ಅನುಭವ ಸಿರಿ’ ಪ್ರಶಸ್ತಿಗಳನ್ನು ನೀಡಿ ಅಭಿನಂದಿಸಲಾಯಿತು.

ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್‍ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಬಗ್ಗೆ ಸಾಮಾನ್ಯ ಜ್ಞಾನ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ. ವಿಶೇಷವಾಗಿ ಯುವ ಸಮುದಾಯ ಈ ಕ್ಷೇತ್ರಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ, `ಭಾರತದ ಪ್ರಧಾನಮಂತ್ರಿಗಳು’ ಕೃತಿ ಬಿಡುಗಡೆ ಮಾಡಿದ ಸಮಾಜ ಸೇವಕ ಕೆ.ರಾಘರಾಂ ವಾಜಪೇಯಿ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡಲು ಪೋಷಕರು ಮುಂದಾಗಬೇಕು. `ಭಾರತದ ಪ್ರಧಾನಮಂತ್ರಿಗಳು’ ಕೃತಿಯ ಬಹುತೇಕ ಲೇಖನಗಳು ಮಕ್ಕಳಿಂದ ಮೂಡಿಬಂದಿರುವುದು ಸಂತಸದ ವಿಷಯ. ಇದರಿಂದ ಮಕ್ಕಳಲ್ಲಿ ಬರವಣಿಗೆ ಕಲೆ ಕರಗತವಾಗುವ ಜೊತೆಗೆ ಜ್ಞಾನ ವೃದ್ಧಿಗೆ ಸಹಕಾರಿ ಆಗಲಿದೆ ಎಂದು ನುಡಿದರು.

ಸಾಹಿತಿ ಉಷಾ ನರಸಿಂಹ ಕೃತಿ ಕುರಿತು ಮಾತನಾಡಿದರು. ಮೇಲುಕೋಟೆ ವೆಂಗೀಪುರ ಮಠದ ಶ್ರೀ ಇಳೈಆಳ್ವಾರ್ ಸ್ವಾಮೀಜಿ, ನಿವೃತ್ತ ಪ್ರಾಂಶುಪಾಲ ಪ್ರೊ.ನೀ.ಗಿರಿಗೌಡ, ಸರ್ ಎಂವಿ ವಿಚಾರ ವೇದಿಕೆ ಕಾರ್ಯದರ್ಶಿ ಬಿ.ಎನ್.ನರಸಿಂಹ, ಟ್ಯುಟೋರಿಯಲ್ಸ್ ವ್ಯವಸ್ಥಾಪಕ ವಿ.ನಾರಾಯಣರಾವ್ ಮತ್ತಿತರರು ಹಾಜರಿದ್ದರು.

Translate »