ಮಕ್ಕಳ ರಕ್ಷಣೆ ಬಗ್ಗೆ ಜಾಗೃತಿ
ಮೈಸೂರು

ಮಕ್ಕಳ ರಕ್ಷಣೆ ಬಗ್ಗೆ ಜಾಗೃತಿ

October 28, 2018

ಮೈಸೂರು:  ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ… ಮಕ್ಕಳ ಬದುಕಿಗೆ ಶಾಲೆಯೇ ಚೆಂದ… ಮಕ್ಕಳಿಗೆ ಬೇಡ ದುಡಿತದ ಬವಣೆ, ಶಿಕ್ಷಣ ಕೊಡುವುದು ನಮ್ಮೆಲ್ಲರ ಹೊಣೆ… ಅಕ್ಕರೆ ತುಂಬಿದ ಶಿಕ್ಷಣವು ಎಲ್ಲಾ ಮಕ್ಕಳಿಗೆ ಸಿಗಲಿ… ಹೀಗೆ, ಮಕ್ಕಳ ಹಕ್ಕುಗಳ ಸಂರಕ್ಷಣೆ ಅರಿವು ಹಾಗೂ ಮಕ್ಕಳ ಸಾಗಾಣಿಕೆ ವಿರುದ್ಧ ಜಾಗೃತಿಗಾಗಿ ನೂರಾರು ಶಾಲಾ ಮಕ್ಕಳು ಹತ್ತುಹಲವು ಮಕ್ಕಳಪರವಾದ ಘೋಷಣೆಗಳನ್ನು ಮೊಳಗಿಸಿದರು.

ಡಾನ್ ಬಾಸ್ಕೋ ಮಕ್ಕಳಾಲಯ, ಬೆಂಗಳೂರಿನ ಒಯಾಸಿಸ್ ಸಂಸ್ಥೆ ಜಂಟಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾಥಾದಲ್ಲಿ ಎನ್‍ಆರ್ ಮೊಹಲ್ಲಾದ ಗುಡ್ ಶಫರ್ಡ್ ಶಾಲೆ, ಸೆಂಟ್ ಆನ್ಸ್ ಪ್ರೌಢಶಾಲೆ ಮಕ್ಕಳು ಪಾಲ್ಗೊಂಡು ಮಕ್ಕಳ ಸಂರಕ್ಷಣೆ ಬಗ್ಗೆ ಸಂದೇಶ ಸಾರಿದರು.

ಜಾಥಾದಲ್ಲಿ ಮುಂದಿನ ಸಾಲಿನಲ್ಲಿದ್ದ ವಿದ್ಯಾರ್ಥಿ ತಂಡ ಬ್ಯಾಂಡ್‍ನ ಸಂಗೀತದೊಂದಿಗೆ ಸಾರ್ವಜನಿಕರ ಗಮನ ಸೆಳೆದರೆ, ಹಿಂದಿನ ಸಾಲಿನಲ್ಲಿದ್ದ ನೂರಾರು ಮಕ್ಕಳು ವಿವಿಧ ಘೋಷಣೆ ಕೂಗಿ ಮಕ್ಕಳ ಸಂರಕ್ಷಣೆಯ ಮಹತ್ವ ಸಾರಿದರು. ಮಕ್ಕಳ ಸಂರಕ್ಷಣೆ ಜೊತೆಗೆ ಎಲ್ಲರಿಗೂ ಶಾಂತಿ ಸಿಗಲಿ… ಎಲ್ಲರಿಗೂ ನ್ಯಾಯ ಸಿಗಲಿ… ಉತ್ತಮ ಪರಿಸರ ನಮ್ಮದಾಗಲಿ… ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ… ಎಂಬಿತ್ಯಾದಿ ಘೋಷಣೆಗಳೂ ಕೇಳಿ ಬಂದವು.

ಗುಡ್ ಶಫರ್ಡ್ ಶಾಲೆ ಆವರಣದಿಂದ ಆರಂಭವಾದ ಜಾಥಾ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಾಜಿ ರಸ್ತೆಯಲ್ಲಿ ಸಂಚರಿಸಿ ಸೆಂಟ್ ಆನ್ಸ್ ಶಾಲೆ ಆವರಣದ ಬಳಿ ಅಂತ್ಯಗೊಂಡಿತು. ಜೊತೆಗೆ ನಗರದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬೀದಿ ನಾಟಕ ಸಾದರಪಡಿಸಿ ಮಕ್ಕಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.

ಡಾನ್ ಬಾಸ್ಕೋ ಮಕ್ಕಳಾಲಯದ ನಿರ್ದೇಶಕ ಫಾದರ್ ಫ್ರಾನ್ಸಿಸ್ ಜಾನ್, ಶಿಕ್ಷಕಿ ಡೈಸಿ, ಸಾಮಾಜಿಕ ಕಾರ್ಯಕರ್ತರಾದ ಫ್ರಾನ್ಸಿಸ್ ಝೇವಿಯರ್, ಲೌರ್ಡ್ ಮೇರಿ, ಚಂದ್ರಕಾಂತ್, ಭಾರತೀ ಮತ್ತಿತರರು ಹಾಜರಿದ್ದರು.

Translate »