ಜನಸಂಖ್ಯಾ ಸ್ಫೋಟದ  ಜಾಗೃತಿ ಜಾಥಾ
ಮೈಸೂರು

ಜನಸಂಖ್ಯಾ ಸ್ಫೋಟದ  ಜಾಗೃತಿ ಜಾಥಾ

July 12, 2018

ಮೈಸೂರು: ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಜನಸಂಖ್ಯಾ ಸ್ಫೋಟದ ದುಷ್ಪರಿಣಾಮ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಮೈಸೂರಿನ ನಜರ್‍ಬಾದ್‍ನಲ್ಲಿ ಆಯೋಜಿಸಿದ್ದ ಜಾಗೃತಿ ಜಾಥದಲ್ಲಿ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಮನೆಗೊಂದು ಮಗು ಸಾಕು ಎಂಬ ಸಂದೇಶ ಸಾರಿದರು.

ಮೈಸೂರಿನ ನಜರ್‍ಬಾದ್‍ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಭಾರತೀಯ ವೈದ್ಯಕೀಯ ಸಂಘ, ಆರ್‍ಎಲ್‍ಹೆಚ್‍ಪಿ ಹಾಗೂ ಒಡಿಪಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಜಾಗೃತಿ ಜಾಥದಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು ಹಾಗೂ ಕಚೇರಿಯ ಸಿಬ್ಬಂದಿ ಪಾಲ್ಗೊಂಡು ಜನಸಂಖ್ಯಾಸ್ಫೋಟದಿಂದ ಆಗುತ್ತಿರುವ ದುಷ್ಪರಿಣಾಮ, ಕುಂಠಿತವಾಗುತ್ತಿರುವ ಅಭಿವೃದ್ಧಿ, ಉಂಟಾಗುತ್ತಿರುವ ಸಮಸ್ಯೆಗಳು, ಜನಸಂಖ್ಯಾ ಸ್ಫೋಟ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳು, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯುಳ್ಳ ಫಲಕಗಳನ್ನು ಹಿಡಿದು ಗಮನ ಸೆಳೆದರು. ನಜರ್‍ಬಾದ್ ಮುಖ್ಯ ರಸ್ತೆ, ಛತ್ರಿ ಮರದ ವೃತ್ತ, ಮಿನಿ ವಿಧಾನಸೌಧ ರಸ್ತೆಯ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ವೈದ್ಯರ ಭವನ ತಲುಪಿದರು.

ಮಾಜಿ ಪಾಲಿಕೆ ಸದಸ್ಯ ಕುಶಲ್ ಕುಮಾರ್, ಜಾಥಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಬಸವರಾಜು, ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿರಾಜ್ ಅಹಮದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಂ.ಪಶುಪತಿ, ಜಿಲ್ಲಾ ಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎನ್.ಎಸ್.ವಿಶ್ವೇಶ್ವರ, ಆರ್‍ಎಲ್‍ಹೆಚ್‍ಪಿ ಸಂಸ್ಥೆಯ ನಿರ್ದೇಶಕಿ ಸರಸ್ವತಿ, ಒಡಿಪಿ ಸಂಸ್ಥೆಯ ಯಮುನಾ, ರೂಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »