ಜನಸಂಖ್ಯಾ ನಿಯಂತ್ರಣಕ್ಕೆ ಜಾಗೃತಿ ಅಗತ್ಯ
ಹಾಸನ

ಜನಸಂಖ್ಯಾ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

July 13, 2018

ಹಾಸನ: ‘ಜನಸಂಖ್ಯಾ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿ ಸುವುದು ಅಗತ್ಯ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸತೀಶ್‍ಕುಮಾರ್ ತಿಳಿಸಿದರು.

ನಗರದ ಡಾ.ಬಿ.ಸಿ.ರಾಯ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಜನಸಂಖ್ಯಾ ಸ್ಫೋಟದಿಂದ ಸಮಾಜ ದಲ್ಲಿ ಉಂಟಾಗುವ ನಿರುದ್ಯೋಗ, ವಸತಿ ಮತ್ತಿತರ ತೊಂದರೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರಿಂದ ದೇಶದ ಜನ ಸಂಖ್ಯೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳ ಬಹುದು. ಈಗಿನಿಂದಲೇ ಮುಂಜಾಗ್ರತೆ ಕ್ರಮವಹಿಸಿ ಜನರಿಗೆ ಮಾಹಿತಿ ನೀಡುವುದು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವ ಮೂಲಕ ಮುಂಬರುವ ತೊಂದರೆ ಗಳನ್ನು ತಡೆಗಟ್ಟಲು ಶ್ರಮಿಸಬೇಕು ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಮಾತನಾಡಿ, ಭಾರತದ ಜನಸಂಖ್ಯೆ 136 ಕೋಟಿಗೂ ಅಧಿಕವಾಗಿದ್ದು, ಪ್ರತಿ ವರ್ಷ ನಮ್ಮ ದೇಶದ ಜನಸಂಖ್ಯೆ 2 ಕೋಟಿಗೂ ಅಧಿಕವಾಗಿ ಹೆಚ್ಚುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ವಸತಿ, ಆಹಾರ ಮುಂತಾದ ಸಮಸ್ಯೆಗಳು ಎದುರಾಗಲಿವೆ. ಇದನ್ನು ತಡೆಗಟ್ಟಲು ನಾವು ಈಗಿನಿಂದಲೇ ಮುಂಜಾಗ್ರತೆ ಕ್ರಮವಹಿಸಬೇಕು ಎಂದರು.
ಗೃಹ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ಕೃಷ್ಣೇಗೌಡ ಮಾತ ನಾಡಿ, ಜನಸಂಖ್ಯೆ ಇಲ್ಲದೆ ಭೂಮಿ ಇಲ್ಲ, ಆದರೆ ಜನ ಸಂಖ್ಯೆ ಅತಿಯಾದರೆ ನಮ್ಮ ಪರಿಸರಕ್ಕೆ ಹೆಚ್ಚು ಹಾನಿ ಉಂಟಾಗುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯು ಮೂಲ ಸೌಕರ್ಯಗಳಿಗಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಅದ್ದರಿಂದ ಜನ ಸಂಖ್ಯಾಸ್ಪೋಟ ತಡೆಯುವುದು ಅತ್ಯಗತ್ಯ ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ಬಿ.ಟಿ.ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ವರ್ಷವಿಡೀ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವ ಮೂಲಕ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡುವಂತೆ ಮಾಡಬೇಕು ಮತ್ತು ಸರ್ಕಾರವು ಹಲವಾರು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳು ಗ್ರಾಮಗಳಿಗೆ ತಲುಪುತ್ತಿಲ್ಲ. ಅವುಗಳನ್ನು ಪಡೆಯುವ ನಿಟ್ಟಿನಲ್ಲಿ ಜನರು ಗಮನ ಹರಿಸಬೇಕು ಎಂದರು.

ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಸಹಾ ಯಕ ಪ್ರಾಧ್ಯಾಪಕ ವಿಜಯ ಯು.ಪಾಟೀಲ್, ಹಿಮ್ಸ್‍ನ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ.ಟಿ.ಆರ್.ಸುಧಾ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿ ದರು. ಕಾರ್ಯಕ್ರಮದಲ್ಲಿ ಮಲೇ ರಿಯಾ ನಿಯಂತ್ರಣಾಧಿಕಾರಿ ಡಾ.ರಾಜ್‍ಗೋಪಾಲ್, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಆರಾಧ್ಯ, ಆರ್‍ಸಿಹೆಚ್ ಅಧಿಕಾರಿ ಡಾ.ಜನಾರ್ಧನ್, ತಾಲೂಕು ಆರೋಗ್ಯಾ ಧಿಕಾರಿ ಡಾ.ಸಂತೋಷ್, ಡಾ.ತಿಮ್ಮಯ್ಯ, ಡಾ.ಸುನೀತಾ, ಆರೋಗ್ಯ ಮತ್ತು ಶಿಕ್ಷಣ ವಿಭಾಗದ ಜಿ.ಹೆಚ್.ಶಿವಣ್ಣ, ಗೃಹ ಮತ್ತು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರುಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.

ಜಾಗೃತಿ ಜಾಥಾಕ್ಕೆ ಚಾಲನೆ: ಗೃಹ ವಿಜ್ಞಾನ ಕಾಲೇಜು ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾ ಚರಣೆ ಸಮಾರಂಭದ ಸಾಮೂಹಿಕ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ನಗರ ಸಭೆಯ ಅಧ್ಯಕ್ಷ ಡಾ.ಅನಿಲ್‍ಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಾಥಾ ಜನತೆಯಲ್ಲಿ ಅರಿವು ಮೂಡಿಸಿತು.

Translate »