ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ರಸ್ತೆ ತಡೆ
ಮಂಡ್ಯ

ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ರಸ್ತೆ ತಡೆ

July 13, 2018

ಮದ್ದೂರು:  ರೈತರ ಎಲ್ಲಾ ಬಗೆಯ ಕೃಷಿ ಸಾಲ ಹಾಗೂ ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ತಾಲೂಕಿನ ಶಿವಪುರದಲ್ಲಿ ಹೆದ್ದಾರಿಯಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ರೈತರ ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿ ಮಾತು ತಪ್ಪಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿ ಹೆದ್ದಾರಿ ತಡೆದರು. ಪರಿಣಾಮ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಬೋರಾಪುರ ಶಂಕರೇಗೌಡ ಮಾತ ನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡದೇ ಬಜೆಟ್‍ನಲ್ಲಿ 2 ಲಕ್ಷ ರೂ. ಸುಸ್ತಿ ಸಾಲ ಮಾಡಿದ್ದು, ಅದಕ್ಕೂ ಷರತ್ತುಗಳನ್ನು ವಿಧಿಸಿರುವುದು ಸರಿಯಿಲ್ಲ. ಇದು ರೈತ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಕೂಡಲೇ ಸಿಎಂ ವಚನ ಭ್ರಷ್ಟರಾಗದೇ ಕೊಟ್ಟ ಎಲ್ಲ ಭರವಸೆಯಂತೆ ಸಾಲಮನ್ನಾ ಮಾಡಿ, ಮುಂಗಾರು ಬಿತ್ತನೆ ಕಾರ್ಯ ಪ್ರಾರಂಭಿ ಸಲು ಹೊಸದಾಗಿ ಸಾಲ ನೀಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಸಕ್ಕರೆ ಕಾರ್ಖಾನೆ ಗಳು ರೈತರಿಗೆ ಬಾಕಿ ಹಣ ಕೊಡಬೇಕು. ಪ್ರಸಕ್ತ ಸಾಲಿನಲ್ಲಿ ಸರಬರಾಜು ಮಾಡಿರುವ ಟನ್ ಕಬ್ಬಿಗೆ 3500 ರೂ. ನಿಗದಿಪಡಿಸಿ ಮತ್ತು ಜುಲೈ ತಿಂಗಳಲ್ಲಿ ಕಾರ್ಖಾನೆ ಆರಂಭಿಸ ಬೇಕು ಎಂದು ಒತ್ತಾಯಿಸಿದರು.

ಪಡಿತರದಲ್ಲಿ 2 ಕೆಜಿ ಅಕ್ಕಿ ಕಡಿಮೆ ಮಾಡ ಬಾರದು. ರೇಷ್ಮೆ ಬೆಲೆ ಕೆಜಿಗೆ 500 ರೂ.ಗಳ ಗಿಂತ ಕಡಿಮೆಯಾಗದಂತೆ ಸ್ಥಿರ ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳ ಬೇಕು. ರೇಷ್ಮೆ ಆಮದು ಸುಂಕ ಹೆಚ್ಚಳ ಹಾಗೂ ಬಸವರಾಜು ಸಮಿತಿ ವರದಿ ಜಾರಿ ಮಾಡಬೇಕು. ಹಾಲು ಒಕ್ಕೂಟಗಳು ಹಾಲಿನ ದರವನ್ನು ಇಳಿಸುತ್ತಿದ್ದಾರೆ. ಈ ಕೂಡಲೇ ಹಾಲಿನ ದರವನ್ನು ಹೆಚ್ಚಿನ ಒಕ್ಕೂಟ ಗಳು ರೈತರ ನಿಲ್ಲಬೇಕು ಎಂದು ಒತ್ತಾಯ ಮಾಡಿದರು.

ರೈತ ಮುಖಂಡರಾದ ಸೊ.ಸಿ. ಪ್ರಕಾಶ್, ಕೆ.ಜಿ.ಉಮೇಶ್, ಮುದ್ದೇಗೌಡ, ರಾಜೇಶ್, ರಾಮಲಿಂಗೇಗೌಡ, ಗಣೇಶ್, ಸತೀಶ್, ಗದ್ದೇಗೌಡ, ಶಿವಲಿಂಗು, ರಾಮೇಗೌಡ, ಕೃಷ್ನಪ್ಪ, ನಾಗರಾಜು, ಪ್ರಭುಲಿಂಗಂ, ಶ್ರೀಧರ್, ರಮೇಶ್, ಕೆಂಪೇ ಗೌಡ, ಬೋರಪ್ಪ ಸೇರಿದಂತೆ ಇನ್ನಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Translate »