ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಲ್ಯಾಬ್ ಸ್ವಚ್ಛತಾಗಾರರ ಪ್ರತಿಭಟನೆ
ಮೈಸೂರು

ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಲ್ಯಾಬ್ ಸ್ವಚ್ಛತಾಗಾರರ ಪ್ರತಿಭಟನೆ

July 12, 2018

ಮೈಸೂರು: ಏಕಾಏಕಿ ಕೆಲಸದಿಂದ ತೆಗೆಯಲಾಗಿದೆ ಎಂದು ಆರೋಪಿಸಿ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಸಿಡಿಸಿ ಅಡಿ ಲ್ಯಾಬ್ ಸ್ವಚ್ಛತಾ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಕಾಲೇಜಿನ ಮುಖ್ಯದ್ವಾರದ ಎದುರು ಜಮಾಯಿಸಿದ ಕಾರ್ಮಿಕರು, ಸಿಡಿಸಿ ಅಡಿ 20 ಮಂದಿ ಕಾಲೇಜಿನ ಲ್ಯಾಬ್‍ಗಳ ಸ್ವಚ್ಛತಾ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದೆವು. ಮಾಸಿಕ 5,500 ರೂ. ವೇತನ ನೀಡಲಾಗುತ್ತಿತ್ತು. ಆದರೆ ಕಾಲೇಜಿನ ಪ್ರಾಂಶುಪಾಲರು 3,500 ರೂ.ಗೆ ಇಳಿಕೆ ಮಾಡುತ್ತೇವೆ ಎಂದರು. ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಲಸದಿಂದಲೇ ತೆಗೆಯಲಾಗಿದೆ ಎಂದು ಆರೋಪಿಸಿದರು.

ನಾವೆಲ್ಲರೂ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದೆವು. ಈಗ ಏಕಾಏಕಿ ಕೆಲಸದಿಂದ ತೆಗೆದಿದ್ದಾರೆ. ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ. ಜೊತೆಗೆ ಲ್ಯಾಬ್‍ಗಳ ಸ್ವಚ್ಛತೆ ಕೆಲಸ ಮಾಡುವವರಿಲ್ಲದೆ, ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ ಎಂದು ಕಿಡಿಕಾರಿದರು.

Translate »