ತಿಂದ ತಿಂಡಿ ಹಣ ಕೇಳಿದ್ದಕ್ಕೆ  ಬೇಕರಿಯಲ್ಲಿ ಯುವಕನಿಂದ ದಾಂಧಲೆ
ಮೈಸೂರು

ತಿಂದ ತಿಂಡಿ ಹಣ ಕೇಳಿದ್ದಕ್ಕೆ  ಬೇಕರಿಯಲ್ಲಿ ಯುವಕನಿಂದ ದಾಂಧಲೆ

May 31, 2018

ಮೈಸೂರು: ಯುವಕನೊಬ್ಬ ತಿಂದ ತಿಂಡಿ ಹಣ ಕೇಳಿದ ಬೇಕರಿ ಕೆಲಸಗಾರನ ಮೇಲೆ ಹಲ್ಲೆ ಮಾಡಿದ ಯುವಕನೊಬ್ಬ ದಾಂಧಲೆ ನಡೆಸಿರುವ ಘಟನೆ ಇಲವಾಲದ ಪೊಲೀಸ್ ಠಾಣೆ ಎದುರೇ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಅಲ್ಲಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬೇಕ್ ಅಂಡ್ ಜಾಯ್ ಬೇಕರಿಯ ಕೆಲಸಗಾರ ನಜೀರ್ ಅಹಮದ್ ಮೇಲೆ ಹಲ್ಲೆ ನಡೆಸಿ ರುವ ಇಲವಾಲ ಠಾಣೆ ಹಿಂಭಾಗದ ನಿವಾಸಿ ಸಂತೋಷ್ ಎಂಬಾತ ನಂತರ ಬೇಕರಿಯ ಪೀಠೋಪಕರಣ, ಗಾಜು, ಹೂ ಕುಂಡಗಳನ್ನು ಒಡೆದು ಹಾಕಿ ದಾಂಧಲೆ ಮಾಡಿದ್ದಾನೆ ಎಂದು ಬೇಕರಿ ಮಾಲೀಕ ಮುಸ್ತಫಾ ಪೊಲೀಸರಿಗೆ ದೂರು ನೀಡಿದ್ದಾರೆ.

ಆಟೋ ಓಡಿಸುತ್ತಿದ್ದ ಸಂತೋಷ್ ಮಂಗಳವಾರ ರಾತ್ರಿ ಸುಮಾರು 10-15 ಘಂಟೆ ವೇಳೆಗೆ ಬೇಕರಿಗೆ ಬಂದು ಬನ್, ಬಿಸ್ಕತ್, ಕೇಕ್ ಕೇಳಿ ಪಡೆದು ತಿಂದಿದ್ದಾನೆ. ಹಣ ಕೇಳಿದಾಗ `ನಾನ್ಯಾರು ಗೊತ್ತಾ, ಇಡೀ ಮೈಸೂರಿಗೆ ರೌಡಿ, ನನ್ನನ್ನೇ ಹಣ ಕೇಳುತ್ತೀಯಾ, ನಿನ್ನ ಬೇಕರಿಯನ್ನು ಉಡೀಸ್ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ಮುಸ್ತಫಾ ದೂರಿನಲ್ಲಿ ತಿಳಿಸಿದ್ದಾರೆ.

ನೀವು ಏನಾದರೂ ಆಗಿ ತಿಂಡಿ ತಿಂದಿದ್ದಕ್ಕೆ ಹಣ ಕೊಡಿ ಎಂದು ನಜೀರ್ ಹೇಳುತ್ತಿದ್ದಂತೆಯೇ ಕೆಂಡಾಮಂಡಲವಾದ ಸಂತೋಷ್, ಹಣ ಕೊಡಬೇಕಾ ಎಂದು ಬಳಿ ಇದ್ದ ಕುಂಡಗಳನ್ನು ಒಡೆದು ಹಾಕಿ ದಾಂಧಲೆ ಮಾಡಿದ್ದಲ್ಲದೆ, ನಮ್ಮ ಕೆಲಸಗಾರನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ ಎಂದು ಮುಸ್ತಫಾ ಇಲವಾಲ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ನನ್ನನ್ನು ಎದುರಾಕಿಕೊಂಡು ಅದ್ಹೇಗೆ ಬೇಕರಿ ನಡೆಸುತ್ತೀರೋ ನೋಡುತ್ತೇನೆಂದು ಬೆದರಿಕೆ ಹಾಕಿ ಹಣವನ್ನೂ ಕೊಡದೆ ಹೋಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಇಂದು ಬೆಳ್ಳಿಗ್ಗೆ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಟಿ.ನಾರಾಯಣಗೌಡ ಹಾಗೂ ಪದಾಧಿಕಾರಿಗಳು ಬೇಕರಿಗೆ ತೆರಳಿ ಪರಿಶೀಲಿಸಿದ ನಂತರ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಪೊಲೀಸ್ ಠಾಣೆ ಎದುರೇ ದಾಂಧಲೆ ನಡೆದರೂ, ಘಟನೆಯ ಗಂಭೀರತೆ ಅರಿಯದೆ ನಿರ್ಲಕ್ಷ್ಯ ವಹಿಸಿದ್ದ ಇಲವಾಲ ಠಾಣೆ ಪೊಲೀಸರು, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಇಂದು ಬೆಳ್ಳಿಗ್ಗೆ ಆರೋಪಿ ವಿರುದ್ಧ ಸೆಕ್ಷನ್ 504, 506, 324 ಮತ್ತು 427 ರೀತ್ಯ ಪ್ರಕರಣ ದಾಖಲಿಸಿ, ತಲೆ ಮರೆಸಿಕೊಂಡಿರುವ ಸಂತೋಷ್ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

Translate »