ಬೆಂಗಳೂರು-ಮೈಸೂರು ಹಾಲಿ ಹೆದ್ದಾರಿ ಕೇಂದ್ರ ಭೂ ಸಾರಿಗೆ ವಶಕ್ಕೆ
ಮೈಸೂರು

ಬೆಂಗಳೂರು-ಮೈಸೂರು ಹಾಲಿ ಹೆದ್ದಾರಿ ಕೇಂದ್ರ ಭೂ ಸಾರಿಗೆ ವಶಕ್ಕೆ

December 4, 2018

ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ನಡುವಿನ ಹೋಟೆಲ್ ಹಾಗೂ ವಾಣಿಜ್ಯ ಮಳಿಗೆಗಳು ಅಲ್ಲದೆ, ಬೃಹತ್ ಜಾಹೀರಾತು ಫಲಕಗಳಿಗೆ ಸಂಚಕಾರ ಬರಲಿದೆ. ಹಾಲಿ ರಸ್ತೆಯನ್ನು ವಿಶ್ವ ದರ್ಜೆಗೇರಿಸಲು ಕೇಂದ್ರ ಭೂ ಸಾರಿಗೆ ಇಲಾಖೆ ತನ್ನ ವಶಕ್ಕೆ ಪಡೆದಿದೆ.

ಜನವರಿ 8, 2019ರಿಂದ ರಸ್ತೆ ಕಾಮಗಾರಿಗೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಈ ಹೆದ್ದಾರಿ ದಶಪಥಕ್ಕೆ ಪರಿವರ್ತಿತವಾಗಲು ಅನುವಾಗುವಂತೆ ಎರಡೂ ಬದಿಯ ಹೋಟೆಲ್ ಸೇರಿದಂತೆ ಎಲ್ಲಾ ಉದ್ಯಮಗಳು ಹಾಗೂ ಕಟ್ಟಡಗಳ ತೆರವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಇಂತಹ ವಾಣಿಜ್ಯ ವಹಿವಾಟು ಸ್ಥಳಗಳು ಈಗಾಗಲೇ ಭೂ ಸ್ವಾಧೀನಕ್ಕೆ ಒಳಪಟ್ಟಿವೆ. ಒಂದು ವೇಳೆ ಭೂ ಸ್ವಾಧೀನಕ್ಕೆ ಒಳಪಡದೆ ನಿರ್ಮಾಣಗೊಳ್ಳಲಿರುವ ರಸ್ತೆಯ ಇಕ್ಕೆಲಗಳಲ್ಲಿ 10 ಮೀಟರ್‍ವರೆಗೆ ಯಾವುದೇ ಹೋಟೆಲ್ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಅಂತಹವರು ತಮ್ಮ ಉದ್ಯಮ ತೆರವುಗೊಳಿಸಬೇಕು, ಇದರೊಂದಿಗೆ ಜಾಹೀರಾತು ಫಲಕಗಳನ್ನೂ ಸ್ಥಳೀಯ ಸಂಸ್ಥೆಗಳು ತೆಗೆದುಹಾಕಬೇಕು.

ಕೇಂದ್ರ ಸರ್ಕಾರ ಈ ಸಂಬಂಧ ರಾಜ್ಯಕ್ಕೆ ಪತ್ರ ಬರೆದು ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ವಾಣಿಜ್ಯ, ಉದ್ಯಮ ನಿರ್ಮಾಣಗಳನ್ನು ತೆರವುಗೊಳಿಸಬೇಕಿದೆ. ಅಷ್ಟೇ ಅಲ್ಲ ಹೊಸ ಮಾರ್ಗದಲ್ಲಿ ಮುಂದೆ ಯಾವುದೇ ಹೋಟೆಲ್‍ಗಳಿಗೆ ಹೊಸದಾಗಿ ಅನುಮತಿ ನೀಡಬಾರದೆಂದು ಸೂಚಿಸಲಾಗಿದೆ.

ಸದರಿ ಹೆದ್ದಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಮುಖ್ಯ ಉದ್ದೇಶವಾಗಿದ್ದು, ರಸ್ತೆ ನಿರ್ಮಾಣ ಕಾರ್ಯದಲ್ಲಿ ಯಾವುದೇ ಅಂಶಗಳು ತೊಡಕಾಗಬಾರದು ಎಂದು ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಪಡಿಸಿದೆ.

ಪ್ರಾಧಿಕಾರದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾರ್ಯ ಪ್ರವೃತ್ತವಾಗಿದ್ದು ಆದಷ್ಟು ಶೀಘ್ರ ಮೈಸೂರು-ಬೆಂಗಳೂರು ರಸ್ತೆಯುದ್ದಕ್ಕೂ ರಾರಾಜಿಸುತ್ತಿರುವ ಜಾಹೀರಾತು ಫಲಕಗಳ ತೆರವಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

Translate »