ರಾತ್ರೋರಾತ್ರಿ ಮಂಡ್ಯ ಮನೆ ಖಾಲಿ ಮಾಡಿದ ಮಾಜಿ ಸಂಸದೆ ರಮ್ಯಾ
ಮಂಡ್ಯ, ಮೈಸೂರು

ರಾತ್ರೋರಾತ್ರಿ ಮಂಡ್ಯ ಮನೆ ಖಾಲಿ ಮಾಡಿದ ಮಾಜಿ ಸಂಸದೆ ರಮ್ಯಾ

December 4, 2018

ಮಂಡ್ಯ: ಮಾಜಿ ಸಂಸದೆ ರಮ್ಯಾ, ಮಂಡ್ಯ ವಿದ್ಯಾನಗರದ ಕೆ.ಆರ್.ರಸ್ತೆಯಲ್ಲಿದ್ದ ತಮ್ಮ ಬಾಡಿಗೆ ಮನೆ ಯನ್ನು ಭಾನುವಾರ ರಾತ್ರೋರಾತ್ರಿ ಖಾಲಿ ಮಾಡಿದ್ದಾರೆ.

2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ರಮ್ಯಾ ಅವರು, ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಸಾದತ್ ಆಲಿಖಾನ್ ಅವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಕಳೆದ ಭಾನುವಾರ ತಡರಾತ್ರಿ 2 ಲಾರಿಗಳಲ್ಲಿ ಮನೆಯಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಇತರೆ ಸಾಮಾನು ಸರಂಜಾಮುಗಳನ್ನು ಬೆಂಗಳೂರಿಗೆ ಸಾಗಿಸಿದ್ದಾರೆ. ಭಾನುವಾರ ರಾತ್ರಿ ಹತ್ತು ಗಂಟೆ ಯಿಂದ ಮಧ್ಯರಾತ್ರಿ ಎರಡು ಗಂಟೆವರೆಗೆ ಮನೆಯಲ್ಲಿದ್ದ ವಸ್ತುಗಳನ್ನು ಎರಡು ಲಾರಿಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಹಾಲಿ ಸಚಿವ ಸಿ.ಎಸ್.ಪುಟ್ಟ ರಾಜು ವಿರುದ್ಧ 67,611 ಮತಗಳ ಅಂತರ ದಿಂದ ಗೆದ್ದು ಮೊದಲ ಬಾರಿಗೆ ರಮ್ಯಾ ಸಂಸತ್ ಪ್ರವೇಶಿಸಿದ್ದರು. ಇಲ್ಲೇ ಇದ್ದು ಮಂಡ್ಯ ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಮಂಡ್ಯ ಜನರಿಗೆ ಭರವಸೆ ನೀಡಿದ್ದರು. ಮಾತು ಕೊಟ್ಟಂತೆ 2013ರ ಅ.27ರಂದು ವಿದ್ಯಾನಗರದಲ್ಲಿ ಮನೆ ಮಾಡಿದ್ದರು. 2014ರ ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪುಟ್ಟರಾಜು ವಿರುದ್ಧ 5,518 ಮತಗಳಿಂದ ಸೋಲು ಅನುಭವಿಸಿದ ಬಳಿಕ ಮಂಡ್ಯ ಮನೆ ಖಾಲಿ ಮಾಡಿ, ವರ್ಷಗಟ್ಟಲೆ ಮಂಡ್ಯ ಕಡೆ ತಲೆ ಹಾಕಿರಲಿಲ್ಲ. ಬೆಂಗಳೂರು ಹಾಗೂ ದೆಹಲಿ ಯತ್ತ ಮುಖ ಮಾಡಿದ್ದರು.

ಮತ್ತೆ ಇದ್ದಕ್ಕಿದ್ದಂತೆ ಮಂಡ್ಯಕ್ಕೆ ಬಂದ ರಮ್ಯಾ, ನಾನು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ. ಶಿಕ್ಷಣ ಮುಗಿಸಿ ವಾಪಸ್ ಬಂದಿದ್ದೇನೆ ಎಂದು ಹೇಳಿದ್ದರು. ಅಲ್ಲದೆ ಇನ್ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಮಂಡ್ಯದಲ್ಲಿ ಎರಡನೇ ಬಾರಿಗೆ ಬಾಡಿಗೆ ಮನೆ ಮಾಡಿದ್ದರು. ಇದೀಗ ಇದ್ದಕ್ಕಿದ್ದಂತೆ ರಾತ್ರೋ ರಾತ್ರಿ ರಮ್ಯಾ ಮಂಡ್ಯದ ಮನೆ ಖಾಲಿ ಮಾಡಿರುವುದು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿನ ಯಾವುದೇ ಚುನಾವಣೆ ವೇಳೆ ಮಂಡ್ಯಕ್ಕೆ ಕಾಲಿಡದ ರಮ್ಯಾ, ಜಿಲ್ಲೆಯಿಂದ ಅಂತರ ಕಾಯ್ದುಕೊಂಡಿದ್ದರು. ಇದರಿಂದ ಕುಪಿತಗೊಂಡಿದ್ದ ಹಲವರು ರಮ್ಯಾ ವಿರುದ್ಧ ವಿನೂತನ ಪ್ರತಿಭಟನೆ ಮಾಡಿದ್ದರು. ಈ ನಡುವೆ ಇತ್ತೀಚೆಗೆ ನಿಧನರಾದ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್‍ರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಬಾಡಿಗೆ ಮನೆಗೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ಜಿಲ್ಲೆಯ ಜನತೆಯ ವಿರೋಧದ ಹಿನ್ನಲೆಯಲ್ಲಿ ರಮ್ಯಾ ಮಂಡ್ಯದ ಮನೆ ಖಾಲಿ ಮಾಡಿದ್ದಾರೆ ಎಂಬ ಊಹಾಪೆÇೀಹಗಳು ಎದ್ದಿವೆ. ಈ ಮಧ್ಯೆ ರಮ್ಯಾ ಮಂಡ್ಯ ರಾಜಕೀಯದಿಂದ ದೂರ ಉಳಿದು, ದೆಹಲಿ ರಾಜಕಾರಣ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈಗಿನ ರಮ್ಯಾ ನಡೆ ಜಿಲ್ಲೆಯ ಜನರ ಮನಸ್ಸನ್ನು ಕದಡಿದೆ. ರಮ್ಯಾ ನಡೆ ಎತ್ತ ಕಡೆ ಎಂಬ ಚರ್ಚೆ ಶುರುವಾಗಿದೆ.

Translate »