ಮತ್ತೊಮ್ಮೆ ಆಪರೇಷನ್ ಕಮಲ ಕಸರತ್ತು…
ಮೈಸೂರು

ಮತ್ತೊಮ್ಮೆ ಆಪರೇಷನ್ ಕಮಲ ಕಸರತ್ತು…

December 4, 2018

ಬೆಂಗಳೂರು: ಆಪರೇಷನ್ ಕಮಲ ನಡೆಸುವ ಮೂಲಕ ಕಾಂಗ್ರೆಸ್‍ನ 20 ರಿಂದ 25 ಶಾಸಕರನ್ನು ಸೆಳೆದು ಮೈತ್ರಿ ಸರ್ಕಾರವನ್ನು ಉರುಳಿಸಿ, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತೊಮ್ಮೆ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ಮಾಜಿ ಸಚಿವ ಶ್ರೀರಾಮುಲು ಆಪ್ತನೋರ್ವ ದುಬೈನ ಉದ್ಯಮಿ ಜೊತೆ ಮಾತನಾಡಿರುವ ಆಡಿಯೋ ಸುದ್ದಿವಾಹಿನಿ ಯೊಂದರಲ್ಲಿ ಪ್ರಸಾರವಾಗಿದ್ದು, ರಾಜ್ಯ ರಾಜ ಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕಾಂಗ್ರೆಸ್‍ನ 20 ರಿಂದ 25 ಶಾಸಕರು ಸಂಪರ್ಕದಲ್ಲಿರುವುದಾಗಿಯೂ ಅವರಿಗೆ ತಲಾ 25 ಕೋಟಿ ಕೊಡಲು ಮಾತುಕತೆ ನಡೆದಿದೆ ಎಂದು ದುಬೈ ಉದ್ಯಮಿ ಜೊತೆ ಹೇಳಿರುವ ಶ್ರೀರಾಮುಲು ಆಪ್ತ, ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಹಣ ನೀಡುವುದರ ಜೊತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಚುನಾವಣೆ ಯಲ್ಲಿ ಸ್ಪರ್ಧಿಸಿದರೆ ಅದರ ವೆಚ್ಚವನ್ನೂ ಭರಿಸುವುದಾಗಿ ಬಿಜೆಪಿ ಮುಖಂಡರು ಭರವಸೆ ನೀಡಿದ್ದಾರಂತೆ. ಸಚಿವ ಸ್ಥಾನದ ಆಕಾಂಕ್ಷಿ ಗಳಾಗಿರುವ ಕಾಂಗ್ರೆಸ್ ಬಂಡಾಯ ಶಾಸಕರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡುವ ಆಮಿಷವನ್ನೂ ಒಡ್ಡಲಾಗಿದೆ ಎಂದು ಶ್ರೀರಾಮುಲು ಆಪ್ತ ದುಬೈ ಉದ್ಯಮಿ ಜೊತೆ ಹೇಳಿಕೊಂಡಿದ್ದಾನೆ. ಬಿಜೆಪಿ ಸಂಪರ್ಕದಲ್ಲಿದ್ದು, ಬೆಳಗಾವಿ ಅಧಿವೇಶನಕ್ಕೂ ಮುನ್ನ ರಾಜೀನಾಮೆ ನೀಡಲಿರುವ ಶಾಸಕರ ಹೆಸರುಗಳನ್ನೂ ಕೂಡ ಆತ ತಿಳಿಸಿದ್ದು, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಗೋಕಾಕ್ ಶಾಸಕರೂ ಆಗಿರುವ ಸಚಿವ ರಮೇಶ್ ಜಾರಕಿಹೊಳಿ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಹೊಸಪೇಟೆ ಶಾಸಕ ಆನಂದ್ ಸಿಂಗ್, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್, ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಮುಳಬಾಗಿಲು ಶಾಸಕ ನಾಗೇಶ್, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರುಗಳು ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಶ್ರೀರಾಮುಲು ಆಪ್ತ ಉಲ್ಲೇಖಿಸಿದ್ದಾನೆನ್ನಲಾಗಿದೆ.

ಈ ಮಧ್ಯೆ ಕಾಂಗ್ರೆಸ್ ಶಾಸಕ ಡಾ. ಕೆ. ಸುಧಾಕರ್ ಅವರು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರನ್ನು ಭೇಟಿ ಮಾಡಿ ತಾವು ಬಿಜೆಪಿಗೆ ಸೇರುವುದರ ಬಗ್ಗೆ ಚರ್ಚಿಸಿದ್ದಾರೆ ಎಂದು ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಸುಧಾಕರ್ ಅವರು, ತಾವು ಅನಾರೋಗ್ಯದ ಕಾರಣದಿಂದ ಕಳೆದ 6 ದಿನಗಳಿಂದ ಜಿಂದಾಲ್‍ನಲ್ಲಿ ಚಿಕಿತ್ಸೆ ಪಡೆಯುತ್ತಿ ರುವುದಾಗಿಯೂ, ತಾವು ಜನಾರ್ಧನ ರೆಡ್ಡಿ ಅವರನ್ನು ಭೇಟಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಆಪರೇಷನ್ ಕಮಲ ಕಾರ್ಯಾಚರಣೆ ಕುರಿತು ಗುಪ್ತಚರ ಇಲಾಖೆಯು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ವರದಿ ನೀಡಿದ್ದು, ಇದರಿಂದ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿಗಳು ಕಾಂಗ್ರೆಸ್ ಹೈಕಮಾಂಡ್‍ಗೆ ಈ ವಿಚಾರವನ್ನು ತಿಳಿಸಿ ಕೆಲವು ಶಾಸಕರು ಮತ್ತು ಸಚಿವರ ಮೇಲೆ ನಿಗಾವಹಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.

ಆಪರೇಷನ್ ಕಮಲ ಆಡಿಯೋ ಲೀಕ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು ಅವರು, ತಾನು ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿರುವುದಾಗಿಯೂ ತನ್ನ ಜೊತೆ ಮಂಜು ಎಂಬಾತ ಇರುವುದು ನಿಜ. ಆದರೆ ಆತನಿಗೆ ಕನ್ನಡ ಬರುತ್ತದೆಯೇ ಹೊರತು ತೆಲುಗು, ಹಿಂದಿ ಬರುವುದಿಲ್ಲ. ಆತ ದುಬೈ ಉದ್ಯಮಿ ಜೊತೆ ಆಪರೇಷನ್ ಕಮಲ ಬಗ್ಗೆ ಮಾತನಾಡಿದ್ದಾರೆ ಎಂದು ಲೀಕ್ ಮಾಡಿರುವ ಆಡಿಯೋ ರಾಜಕೀಯ ಷಡ್ಯಂತರದಿಂದ ಕೂಡಿದೆಯೇ ಹೊರತು, ಆಪರೇಷನ್ ಕಮಲಗೆ ನಾವು ಕೈ ಹಾಕಿಲ್ಲ ಎಂದರು. ಈ ಸಂಬಂಧ ವಿಧಾನಸೌಧದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಆಪರೇಷನ್ ಕಮಲ ಮಾಡುವುದು ಬಿಜೆಪಿಯವರ ಹಕ್ಕು. ನಾನ್ಯಾಕೆ ಅದನ್ನು ತಡೆಯಲು ಹೋಗಲಿ ಎಂದು ವ್ಯಂಗ್ಯವಾಗಿ ನುಡಿದರು.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿಯವರಿಗೆ ಬಹುಮತ ಸಿಕ್ಕಿಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕು. ಆಪರೇಷನ್ ಕಮಲ ಮಾಡಲು ಅವರು ಮೊದಲಿನಿಂದಲೂ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಕಾಂಗ್ರೆಸ್‍ನ ಓರ್ವ ಶಾಸಕನೂ ಕೂಡ ಬಿಜೆಪಿಗೆ ಹೋಗುವುದಿಲ್ಲ. ಮೈತ್ರಿ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ ಎಂದರು.

Translate »