ಕಲಾಮಂದಿರದಂತಾಯ್ತು ಬೇಲೂರು ಕ್ಷೇತ್ರ ಸಂಪನ್ಮೂಲ ಕೇಂದ್ರ
ಹಾಸನ

ಕಲಾಮಂದಿರದಂತಾಯ್ತು ಬೇಲೂರು ಕ್ಷೇತ್ರ ಸಂಪನ್ಮೂಲ ಕೇಂದ್ರ

August 12, 2018

ಬೇಲೂರು: ಕಲೆ ಅರಳಲು, ಪ್ರತಿಭೆ ಅನಾವರಣಗೊಳಿಸಲು ಯಾವ ಸ್ಥಳವಾದರೇನು? ಯಾವ ವಸ್ತುವಾದರೇನು? ಇಲ್ಲಿ ಅಗತ್ಯವಿರುವುದು ಆಸಕ್ತಿ ಮತ್ತು ಶಿಸ್ತು ಮಾತ್ರ.

ಇದಕ್ಕೆ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಾಕ್ಷಿಯಾಗಿದ್ದು, ಈ ಕೇಂದ್ರವಿಂದು ಚಿತ್ರಕಲಾ ಶಿಕ್ಷಕರ ಕುಂಚದಿಂದ ಕಲಾರಾಧನೆ ಗೊಂಡು ಕಂಗೊಳಿಸುತ್ತಿದೆ. ಇದನ್ನು ನೋಡಿದವರಿಗೆ ಇದೇನು ಶಿಕ್ಷಣ ಇಲಾ ಖೆಗೆ ಸೇರಿದ ಕಚೇರಿ ಕಟ್ಟಡವೊ ಅಥವಾ ಕಲಾ ರಂಗಮಂದಿರವೊ ಎಂಬಂತೆ ಭಾಸವಾಗುತ್ತಿದ್ದು, ಉದ್ಘಾಟನೆ ಮೂಲಕ ಸೇವೆಗೆ ಮುಕ್ತವಾಗಿದೆ.

ಅನೇಕರಲ್ಲಿ ಸರ್ಕಾರಿ ಕಚೇರಿ ಕಟ್ಟಡಗಳು ಎಂದಾಗ ಮನಸ್ಸಿನಲ್ಲಿ ಮೂಡುವ ಚಿತ್ರವೇ ಬೇರೆ. ಬಿರುಕುಬಿಟ್ಟ ಗೋಡೆಗಳು, ಸುಣ್ಣಬಣ್ಣವಿಲ್ಲದ ಕಟ್ಟಡ, ಕುಟ್ಟು ಹಿಡಿದಿರುವ ಕಿಟಿಕಿ-ಬಾಗಿಲು ಚಿತ್ರಣ ಕಣ್ಣು ಮುಂದೆ ಹಾದುಹೋಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಂಪೂರ್ಣವಾಗಿ ನವೀಕರಣಗೊಂಡಿದ್ದು, ನೋಡುಗರ ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತಿದೆ.

3 ಲಕ್ಷ ರೂ. ಹಣ ವ್ಯಯಿಸಿದ ಬಿಆರ್‍ಸಿ: ಈ ಕಾರ್ಯಕ್ಕೆ ಕ್ಷೇತ್ರ ಸಂಪನ್ಮೂಲ ಅಧಿ ಕಾರಿ ಎನ್.ಎಸ್.ದೇವರಾಜ್ ಪರಿಶ್ರಮ, ಆಸಕ್ತಿ-ಅಭಿರುಚಿಯೇ ಕಾರಣವಾಗಿದ್ದು, ಹಾಸನದ ಡಯಟ್ ಪ್ರಾಂಶುಪಾಲ ನಾಗೇಶ್‍ರ ಪ್ರೇರಣೆ, ಸ್ಥಳೀಯ ಬಿಇಓ ಶಾಕೀರ್ ಅಲಿಖಾನ್‍ರ ಸಹಕಾರ ಹಾಗೂ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರ ಶ್ರಮದ ಫಲದಿಂದ ಇಂದು ಪಟ್ಟಣದ ಬಿಆರ್‍ಸಿ ಕಟ್ಟಡ ಕಲಾ ಮಂದಿರದಂತೆ ರೂಪು ಗೊಂಡಿದೆ. ಕಟ್ಟಡ ನವೀಕರಣಕ್ಕಾಗಿ ಬಿಆರ್‍ಸಿ ದೇವರಾಜ್ ಸ್ವತಃ 3 ಲಕ್ಷ ರೂ. ಹಣ ವ್ಯಯಿಸಿ ಮಾದರಿಯಾಗಿದ್ದಾರೆ.

ಎನ್.ಎಸ್.ದೇವರಾಜ್ ಮುತುವರ್ಜಿ: ಸಾಧಾರಣ ಕಟ್ಟಡಕ್ಕೆ ಚಿತ್ರಕಲೆ, ಸಣ್ಣಪುಟ್ಟ ಮಾರ್ಪಾಡುಗಳ ಮೂಲಕ ಎನ್.ಎಸ್. ದೇವರಾಜ್ ಮುತುವರ್ಜಿ ವಹಿಸಿ ಹೊಸ ದೊಂದು ರೂಪವನ್ನೇ ಕೊಟ್ಟಿದ್ದು, ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಂತೆ ಇಡೀ ಕಟ್ಟಡದ ಒಳ ಹಾಗೂ ಹೊರಭಾಗದ ಗೋಡೆಯನ್ನು ಚಿತ್ರಗಳ ಮೂಲಕವೇ ಶೃಂಗರಿಸಲಾಗಿದೆ.

ವರ್ಲಿ ಕಲೆ ಅನಾವರಣ: ಜನಪದ ನೃತ್ಯಗಳು, ಹೊಯ್ಸಳ ಶಿಲಾಬಾಲಿಕೆ, ಯಕ್ಷಗಾನ, ಕರಾವಳಿ ಶೈಲಿ ಚಿತ್ರಗಳು, ಜಾತ್ರೆ, ಪ್ರಕೃತಿ ಚಿತ್ರಗಳು, ಗ್ರಾಮೀಣ ಬದುಕು, ಕ್ರೀಡೆ, ವ್ಯವಸಾಯ, ಪ್ರಾಣಿ-ಪಕ್ಷಿಗಳು ಚಿತ್ರಗಳು, ಹೊಯ್ಸಳ ಲಾಂಛನ, ಸ್ವಚ್ಛ ಭಾರತ್, ಹಬ್ಬಹರಿದಿನ, ಇನ್ನಿತರ ಶೈಲಿಯ ಚಿತ್ರಗಳನ್ನು ವರ್ಲಿಕಲೆಯ ಮೂಲಕ ಅರ್ಥ ಪೂರ್ಣವಾಗಿ ಚಿತ್ರಕಲಾ ಶಿಕ್ಷಕರು ಬಿಡಿಸಿದ್ದು, ಕಲಾ ರಸಿಕರ ಗಮನ ಸೆಳೆಯುತ್ತಿದೆ.

3 ತಿಂಗಳು, 6 ಮಂದಿ ಶಿಕ್ಷಕರು: ಇಡೀ ಕಟ್ಟಡಕ್ಕೆ ಚಿತ್ರ ಬಿಡಿಸಲು 6 ಮಂದಿ ಚಿತ್ರಕಲಾ ಶಿಕ್ಷಕರು ಬರೋಬ್ಬರಿ 3 ತಿಂಗಳು ಸಮಯ ತೆಗೆದುಕೊಂಡಿದ್ದು, ಬುದ್ಧ ಪ್ರೌಢಶಾಲೆಯ ಜಲಂಧರ್, ಹೊಯ್ಸಳ ಹಳೇಬೀಡು ಶಾಲೆಯ ಎಂ.ವೈ.ರಾಜು, ಅಡಗೂರು ಪ್ರೌಢಶಾಲೆಯ ಜಯಣ್ಣ, ವಿವೇಕಾನಂದ ಪ್ರೌಢಶಾಲೆಯ ರವಿಕಾಂತ್, ಪ್ರಾಥಮಿಕ ಶಾಲೆಯ ಗುರುರಾಜ್, ಹುಲಿಕಲ್ಲೇಶ್ವರದ ಪ್ರಕಾಶ್, ಹಳೇಬೀಡು ಪ್ರಾಥಮಿಕ ಶಾಲಾ ಶಂಕರೇಗೌಡ ಪರಿಶ್ರಮದ ಫಲ ರಂಗು ರಂಗಿನ ಚಿತ್ರಗಳು ಆಕರ್ಷಣೀಯವಾಗಿ ಮೂಡಿಬಂದಿದೆ. ಕೇಂದ್ರದ ಸಭಾಂಗಣಕ್ಕೆ `ಸರ್ವಪಲ್ಲಿ ರಾಧಾಕೃಷ್ಣ’ ಹೆಸರು ಇಡಲಾಗಿದೆ.

ಅಗತ್ಯ ಸೌಕರ್ಯ: ಬಣ್ಣ, ವಿದ್ಯುತ್ ವೈರಿಂಗ್, ಕಿಟಿಕಿಗಳಿಗೆ ಗಾಜು, ಕಚೇರಿಗೆ ಪೀಠೋಪಕರಣ, ಕುಡಿಯುವ ನೀರಿನ ಸಂಪು ನಿರ್ಮಾಣಕ್ಕೆ ಬಿಆರ್‍ಸಿ ದೇವ ರಾಜ್ ಸ್ವಂತ ಹಣ ಭರಿಸಿದ್ದು, ಜೊತೆಗೆ ಪುರಸಭಾ ಅಧ್ಯಕ್ಷೆ ಭಾರತೀ ಅರುಣ್ ಕುಮಾರ್ ಹಾಗೂ ಸದಸ್ಯರಲ್ಲಿ ಮನವಿ ಮಾಡಿ, ಕೇಂದ್ರಕ್ಕೆ ಕೊಳವೆ ಬಾವಿ, ಶಾಲೆ ಗಳಿಗೆ ಸಂಪರ್ಕ ಕಲ್ಪಿಸುವ ಒಳಚರಂಡಿ, ಕಾಂಪೌಂಡ್ ವ್ಯವಸ್ಥೆ ಮಾಡಿಸಿ ಒಳಚರಂಡಿ ದುರ್ವಾಸನೆಯಿಂದ ವಿದ್ಯಾರ್ಥಿಗಳನ್ನು, ಸ್ಥಳೀಯರನ್ನು ಮುಕ್ತವಾಗಿಸಿದ್ದಾರೆ.

ತಾವು ಸೇವೆ ಸಲ್ಲಿಸಿದ ಕಚೇರಿಗೆ ಸ್ಮರಿಸುವ ಕೊಡುಗೆ ನೀಡಿದ ಬಿಆರ್‍ಸಿ ದೇವರಾಜ್ ಸದ್ಯ ಚಿಕ್ಕಮಗಳೂರಿನ ಡಯಟ್‍ಗೆ ಉಪನ್ಯಾಸಕರಾಗಿ ವರ್ಗಾವಣೆಗೊಂಡಿದ್ದು, ನವೀಕೃತ ಕೇಂದ್ರದ ಉದ್ಘಾಟನೆಗೆ ಆಗಮಿಸಿದ್ದ ಡಿಡಿಪಿಐ ಮಂಜು ನಾಥ್ ಬಿಆರ್‍ಸಿ ದೇವರಾಜ್ ಸೇರಿದಂತೆ ಇತರರು ಚಿತ್ರಕಲಾ ಶಿಕ್ಷಕರನ್ನು ಹಾಗೂ ನೆರವು ನೀಡಿದವರನ್ನು ಶ್ಲಾಘಿಸಿದರು.

Translate »