ಮೈಸೂರು ಪಾಲಿಕೆ ಚುನಾವಣೆ: ಮಾಜಿ ಸಿಎಂ ಸಿದ್ದರಾಮಯ್ಯರ ಮೊರೆ  ಹೋದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
ಮೈಸೂರು

ಮೈಸೂರು ಪಾಲಿಕೆ ಚುನಾವಣೆ: ಮಾಜಿ ಸಿಎಂ ಸಿದ್ದರಾಮಯ್ಯರ ಮೊರೆ  ಹೋದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು

August 12, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ಹೊರಬೀಳುತ್ತಿದ್ದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಟಿಕೆಟ್ ಗಿಟ್ಟಿಸಿಕೊಳ್ಳಲು ಲಾಭಿ ಆರಂಭಿಸಿದ್ದಾರೆ.

ಶನಿವಾರ ಬೆಳಿಗ್ಗೆ ಮೈಸೂರಿನಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಕಾಂಗ್ರೆಸ್‍ನ ಅನೇಕ ಹಾಲಿ, ಮಾಜಿ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಸ್ಥಳೀಯ ಮುಖಂಡರು ಭೇಟಿ ನೀಡಿದ್ದರು. ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಟಿಕೆಟ್ ಗಿಟ್ಟಿಸಲು ಹೀಗೆ ಪಕ್ಷದ ಹಿರಿಯ ನಾಯಕರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಸ್ಥಳೀಯ ಮುಖಂಡರು ದೌಡಾಯಿಸಿದ್ದರು.

ಆಕಾಂಕ್ಷಿಗಳು ಟಿಕೆಟ್‍ಗಾಗಿ ಶಿಫಾರಸ್ಸು ಮಾಡುವಂತೆ ಸಿದ್ದರಾಮಯ್ಯ ಅವರಲ್ಲಿ ಈ ವೇಳೆ ಮನವಿ ಮಾಡಿದರು ಎನ್ನಲಾಗಿದೆ. ವಾರ್ಡ್ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಸಂಬಂಧ ಆಕ್ಷೇಪ ವ್ಯಕ್ತಪಡಿಸಿದ್ದ ಹಾಲಿ ಪಾಲಿಕೆ ಸದಸ್ಯರು, ತಕರಾರು ಅರ್ಜಿ ಹೈಕೋರ್ಟ್‍ನಲ್ಲಿ ತಿರಸ್ಕøತವಾದ ಬೆನ್ನಲ್ಲಿ ವಾರ್ಡ್‍ಗಳ ಆಯ್ಕೆ ಸಂಬಂಧ ಚಿಂತನೆಯಲ್ಲಿ ಮುಳುಗಿದ್ದಾರೆ. ಇದರೊಂದಿಗೆ ಪ್ರಮುಖ ಪಕ್ಷಗಳ ಹಾಲಿ ಪಾಲಿಕೆ ಸದಸ್ಯರು ಹಾಗೂ ಮುಖಂಡರು ಪಕ್ಷದ ಟಿಕೆಟ್ ಗಿಟ್ಟಿಸಲು ವರಿಷ್ಠರತ್ತ ಮುಖ ಮಾಡಿದ್ದಾರೆ.

ಅದೇ ರೀತಿ ಶುಕ್ರವಾರ ಮೈಸೂರಿಗೆ ಆಗಮಿಸಿ ಟಿಕೆ ಬಡಾವಣೆಯ ತಮ್ಮ ನಿವಾಸದಲ್ಲಿ ವ್ಯಾಸ್ತವ್ಯ ಹೂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಶನಿವಾರ ಬೆಳಿಗ್ಗೆ ಕಾಂಗ್ರೆಸ್‍ನ ಅನೇಕ ಪಾಲಿಕೆ ಸದಸ್ಯರು ಹಾಗೂ ಮುಖಂಡರು ಭೇಟಿ ಮಾಡಿ ಟಿಕೆಟ್ ಪಡೆಯಲು ಕಸರತ್ತು ಆರಂಭಿಸಿದ್ದಾರೆ. ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಟಿಕೆಟ್ ಹಂಚಿಕೆ ಸಂಬಂಧ ಪಕ್ಷದ ಸ್ಥಳೀಯ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದರು ಎಂದು ಹೇಳಲಾಗಿದೆ.

ಮಾಜಿ ಸಚಿವರೂ ಆದ ಶಾಸಕ ತನ್ವೀರ್‍ಸೇಠ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಸದಸ್ಯ ಜಗದೀಶ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದರಾಜು, ಪರಿಷತ್ ಮಾಜಿ ಸದಸ್ಯ ಪುಟ್ಟಸಿದ್ಧಶೆಟ್ಟಿ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದ್ದರು. ಅಲ್ಲದೆ, ನೂತನವಾಗಿ ಅಧಿಕಾರ ಸ್ವೀಕರಿಸಿರುವ ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‍ಚಂದ್ರ ಸಹ ಭೇಟಿ ನೀಡಿದ್ದರು. ತಿ.ನರಸೀಪುರ ಪುರಸಭಾ ಚುನಾವಣೆ ಸಂಬಂಧ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆಯೂ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲಿನ ಮುಖಂಡರೊಂದಿಗೆ ಸಭೆ ನಡೆಸಿ ಆ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು ಎನ್ನಲಾಗಿದೆ.

Translate »