ರಾಜ್ಯ ಸರ್ಕಾರದಿಂದ ವರ್ಗಾವಣೆ ದಂಧೆ: ಸೂಕ್ತ ಕ್ರಮ ಕೈಗೊಳ್ಳಲು ಚು.ಆಯೋಗಕ್ಕೆ ಈಶ್ವರಪ್ಪ ಆಗ್ರಹ
ಮೈಸೂರು

ರಾಜ್ಯ ಸರ್ಕಾರದಿಂದ ವರ್ಗಾವಣೆ ದಂಧೆ: ಸೂಕ್ತ ಕ್ರಮ ಕೈಗೊಳ್ಳಲು ಚು.ಆಯೋಗಕ್ಕೆ ಈಶ್ವರಪ್ಪ ಆಗ್ರಹ

August 12, 2018

ಮೈಸೂರು:  ನಗರ ಸ್ಥಳೀಯ ಸಂಸ್ಥೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜ್ಯ ಸರ್ಕಾರ ಮಾತ್ರ ವರ್ಗಾವಣೆ ದಂಧೆ ನಡೆಸುತ್ತಿದೆ. ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

ಮೈಸೂರಿನ ಖಾಸಗಿ ಹೊಟೇಲ್‍ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ 52 ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆಯ ಸಿ ಗ್ರೂಪ್ ನೌಕರರು ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ವರ್ಗಾವಣೆ ಮಾಡಬಾರದೆಂಬ ತಿಳಿವಳಿಕೆ ಮುಖ್ಯಮಂತ್ರಿ ಹೆ.ಚ್.ಡಿ. ಕುಮಾರಸ್ವಾಮಿ ಹಾಗೂ ಸಂವಿಧಾನ ಕಾನೂನು ಬಲ್ಲ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ತಿಳಿದಿಲ್ಲವೇ? ಚುನಾವಣಾ ಆಯೋಗ ನೀತಿ ಸಂಹಿತೆ ಗಾಳಿಗೆ ತೂರಿರುವ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಶ್ವರಪ್ಪ ಪೆದ್ದ, ಅವನಿಗೆ ಕಾನೂನು ಗೊತ್ತಿಲ್ಲ ಎಂದು ಏಕವಚನದಲ್ಲಿ ತಮ್ಮನ್ನು ಟೀಕಿಸಿದ್ದಾರೆ. ಹೌದು, ನಾನು ಪೆದ್ದ ಇರಬಹುದು. ಆದರೆ, ನೀವು ಸಂವಿಧಾನ, ಕಾನೂನು ತಿಳಿದುಕೊಂಡವರು. ನೀತಿ ಸಂಹಿತೆ ಜಾರಿಯಲ್ಲಿರುವಾಗ ವರ್ಗಾವಣೆ ಮಾಡಬಹುದೇ? ಎಂಬುದಕ್ಕೆ ಉತ್ತರಿಸಬೇಕು. ಇನ್ನು ಮುಂದೆ ನೀವು ನನ್ನನ್ನು ಏಕವಚನದಲ್ಲಿ ಟೀಕೆ ಮಾಡಿದರೆ ನಿಮಗೆ ಯಾವ ಭಾಷೆಯಲ್ಲಿ ಉತ್ತರ ನೀಡಬೇಕೋ ಆ ಭಾಷೆಯಲ್ಲಿ ಉತ್ತರ ನೀಡಲಾಗುವುದು. ನಮಗೂ ನೀವು ಬಳಸಿದಂತಹ ಕೆಟ್ಟ ಪದಗಳನ್ನು ಬಳಕೆ ಮಾಡಲು ಬರುತ್ತದೆ ಎಂದು ಎಚ್ಚರಿಸಿದರು.

ದುಂದು ವೆಚ್ಚದ ತನಿಖೆಗೆ ಒತ್ತಾಯ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಷ್ಟ್ರದ ವಿವಿಧ ರಾಜಕೀಯ ಮುಖಂಡರಿಗೆ ಜೆಡಿಎಸ್‍ನಿಂದ ಆಮಂತ್ರಣ ನೀಡಲಾಗಿತ್ತು. ಆದರೆ, ಸಮಾರಂಭದ ಖರ್ಚನ್ನು ಸರ್ಕಾರ ಭರಿಸಿದೆ. ಆತಿಥ್ಯಕ್ಕೆ ದುಬಾರಿ ವೆಚ್ಚ ಮಾಡಿರುವ ಕುರಿತು ಈ ಹಿಂದೆ ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅರಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ಆಕ್ಷೇಪದ ನಡುವೆಯೂ ಆತಿಥ್ಯದ ವೆಚ್ಚವನ್ನು ಸರ್ಕಾರ ಭರಿಸಿದೆ. ಈ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಆಂಧಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಮಾರಂಭದಲ್ಲಿ ಇದ್ದಿದ್ದು ಕೇವಲ ಎರಡು ಮೂರು ಗಂಟೆ ಮಾತ್ರ. ಆದರೆ, ಅವರ ಆತಿಥ್ಯಕ್ಕೆ 8.73 ಲಕ್ಷ ರೂ. ವಿನಿಯೋಗಿಸಲಾಗಿದೆ ಎಂಬ ವಿಚಾರವನ್ನು ಕೇಳಿ ಸ್ವತಃ ಚಂದ್ರಬಾಬು ನಾಯ್ಡು ತನಿಖೆಗೆ ಆಗ್ರಹಿಸಿದ್ದಾರೆ. ಸರ್ಕಾರಿ ಆತಿಥ್ಯ ನೀಡುವಾಗ ಮದ್ಯ ನೀಡುವಂತಿಲ್ಲ ಎಂಬ ನಿಯಮ ಇದ್ದರೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮದ್ಯ ಪೂರೈಕೆಗೆ 75 ಸಾವಿರ ರೂ. ಖರ್ಚು ಮಾಡಲಾಗಿದೆ. ಈ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಶ್ನೆ ಮಾಡಬೇಕಾಗಿತ್ತು. ಆದರೆ, ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಪತ್ರ ಬರೆಯಲು ಇವರೇನು ಗುಮಾಸ್ತರಾ!

ಮೈಸೂರು, ಶಿವಮೊಗ್ಗ ಮತ್ತು ತುಮಕೂರು ನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ಜತೆಗೆ ಚುನಾವಣೆ ನಂತರ ಹೊಂದಾಣಿಕೆ ಮಾಡಿಕೊಳ್ಳಬೇಕೋ ಅಥವಾ ಬೇಡವೋ ಎಂಬ ವಿಚಾರದ ಬಗ್ಗೆ ನನಗೆ ತಿಳಿದಿಲ್ಲ ಎಂದರು.

ರೈತರಿಗೆ ನಾಟಿ ಮಾಡಲು ಹೇಳಿಕೊಡಬೇಕಾ ಮಾಜಿ ಡಿಸಿಎಂ ಈಶ್ವರಪ್ಪ ಲೇವಡಿ

ಮೈಸೂರು:  ರೈತರ ಸಂಕಷ್ಟಗಳ ನಿವಾರಣೆ ಮಾಡಲು ಆಸಕ್ತಿ ತೋರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರೈತರಿಗೆ ನಾಟಿ ಮಾಡಲು ಹೇಳಿಕೊಡಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಮೈಸೂರಿನ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾಟಿ ಮಾಡಲು ರೈತರಿಗೆ, ಕುರಿ ಸಾಕಲು ಕುರುಬರಿಗೆ, ಗೋವುಗಳನ್ನು ಸಾಕಲು ಗೊಲ್ಲರಿಗೆ ಹೇಳಿಕೊಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಲು ಆಸಕ್ತಿ ತೋರಬೇಕಾಗಿತ್ತು. ಈ ಕುರಿತು ಪ್ರಶ್ನಿಸಿದರೆ, ದುಡ್ಡಿನ ಗಿಡ ಹಾಕಿ ಎಂದು ಉತ್ತರಿಸುತ್ತಾರೆ. ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ವಿತರಿಸಲು ಆಸಕ್ತಿ ತೋರಿಸುತ್ತಿಲ್ಲ. ರೈತರ ಸಂಕಷ್ಟಗಳಿಗೆ ಮುಖ್ಯಮಂತ್ರಿಯಾದವರು ಸ್ಪಂದಿಸಬೇಕು. ಅದನ್ನು ಬಿಟ್ಟು ನಾಟಿ ನೆಟ್ಟು ಗಿಮಿಕ್ ಮಾಡುವುದು ಸರಿಯಲ್ಲ.

ನಾವಾಗಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಮುಂದಾಗುವುದಿಲ್ಲ. ಆದರೆ, ಲೋಕಸಭಾ ಚುನಾವಣೆ ನಂತರ ತಾನಾಗಿಯೇ ಬೀಳುವುದು ಖಚಿತವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

Translate »