ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಮಾಡುವವರಿಗೆ ಪಾಲಿಕೆ ಚುನಾವಣೆಗೆ ಪಕ್ಷದ ಟಿಕೆಟ್ ಇಲ್ಲ ಮಾಜಿ ಸಚಿವ ಸಿ.ಟಿ.ರವಿ ಖಡಕ್ ನುಡಿ
ಮೈಸೂರು

ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಮಾಡುವವರಿಗೆ ಪಾಲಿಕೆ ಚುನಾವಣೆಗೆ ಪಕ್ಷದ ಟಿಕೆಟ್ ಇಲ್ಲ ಮಾಜಿ ಸಚಿವ ಸಿ.ಟಿ.ರವಿ ಖಡಕ್ ನುಡಿ

August 12, 2018

ಮೈಸೂರು: ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷದ ನಾಯಕರಿಗೆ ಗುಡ್ ಮಾರ್ನಿಂಗ್, ಗುಡ್‍ನೈಟ್ ಮೆಸೇಜ್‍ಗಳು ಹೆಚ್ಚಾಗುತ್ತಿವೆ. ಇಂತಹ ಮೆಸೇಜ್ ಕಳುಹಿಸುವವರ ಹೊರತಾಗಿ ಜನರೊಂದಿಗೆ ಬೆರೆತು ಕೆಲಸ ಮಾಡುವವರನ್ನು ಗುರುತಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಮೈಸೂರಿನ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚುನಾವಣಾ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಹಾಗೂ ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಇದೇ ಸೂತ್ರವನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲೂ ಅನುಸರಿಸಲಾಗುತ್ತದೆ.

ನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಕ್ಕಾಗಿ ಬಿಜೆಪಿ ತನ್ನದೇ ಆದ ಸೂತ್ರ ಅನುಸರಿಸುತ್ತದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ನಮಗೆ ಗುಡ್ ಮಾರ್ನಿಂಗ್, ಗುಡ್‍ನೈಟ್ ಮೆಸೇಜ್ ಹೆಚ್ಚಾಗುತ್ತಿದೆ. ಈ ರೀತಿ ಮೆಸೇಜ್ ಕಳುಹಿಸುವವರಿಗೆ ಟಿಕೆಟ್ ನೀಡಬೇಕೇ? ಕೆಲವರು ಬಿಜೆಪಿ ಮುಖಂಡರ ಬಳಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿ ತಾನು ಕೂಡ ಮುಖಂಡ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಾರೆ. ಕೆಲವರು ಎಂಪಿ, ಎಂಎಲ್‍ಎಗಳ ಹಿಂದೆ ಸದಾ ಓಡಾಡುತ್ತಿರುತ್ತಾರೆ. ಜನರಿಂದ ದೂರವಾಗಿ ಕೇವಲ ಪಕ್ಷದ ಮುಖಂಡರೊಂದಿಗೆ ಮಾತ್ರ ಗುರುತಿಸಿಕೊಳ್ಳುವ ಇಂಥವರಿಗೆ ಟಿಕೆಟ್ ನೀಡಬೇಕೆ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ ಎಂದರು.

ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಯಾಗ ಬಯಸುವವರು ವಾರ್ಡ್ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಜನಸಂಪರ್ಕ ಹೊಂದಿಲ್ಲದ ಆಕಾಂಕ್ಷಿಗಳ ಹೆಸರನ್ನು ಕೈ ಬಿಟ್ಟು ಉಳಿದ ಅಭ್ಯರ್ಥಿಗಳ ಹೆಸರನ್ನು ವಾರ್ಡ್ ಸಮಿತಿ ನಗರ ಚುನಾವಣಾ ಸಮಿತಿಗೆ ಕಳುಹಿಸಲಿದೆ. ನಗರ ಚುನಾವಣಾ ಸಮಿತಿಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಟಿಕೆಟ್ ಘೋಷಣೆ ಮಾಡಲಾಗುತ್ತದೆ. ಟಿಕೆಟ್ ನೀಡಲು ಗೆಲುವೊಂದೇ ಮಾನದಂಡ. ಯಾವುದೇ ಪಕ್ಷಕ್ಕೆ ಸೇರದ ಆದರೆ, ಚುನಾವಣೆಯಲ್ಲಿ ನಿಲ್ಲಿಸಿದರೆ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳಿಗೆ ಎರಡನೇ ಆದ್ಯತೆ, ಬೇರೆ ಪಕ್ಷದಲ್ಲಿರುವ ವ್ಯಕ್ತಿ ನಮ್ಮ ಪಕ್ಷಕ್ಕೆ ಬಂದರೆ ಗೆಲ್ಲುವ ಸಾಧ್ಯತೆ ಇದ್ದರೆ ಅಂಥ ವ್ಯಕ್ತಿಯನ್ನು ಮೂರನೇ ಆದ್ಯತೆಯಾಗಿ ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ಎಸ್.ಎ. ರಾಮದಾಸ್, ಲಕ್ಷ್ಮಣ ಸವದಿ, ನಾರಾಯಣಸ್ವಾಮಿ, ಶಾಸಕರಾದ ಎಲ್. ನಾಗೇಂದ್ರ, ರಾಜ್ಯ ಸಹ ವಕ್ತಾರ ರಘು ಕೌಟಿಲ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ. ರಾಜೇಂದ್ರ, ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಜಿಲ್ಲಾಧ್ಯಕ್ಷ ಎಂ. ಶಿವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »