ಮೈಸೂರಲ್ಲಿ ಭಗತ್ ಸಿಂಗ್ ಜನ್ಮ ದಿನಾಚರಣೆ
ಮೈಸೂರು

ಮೈಸೂರಲ್ಲಿ ಭಗತ್ ಸಿಂಗ್ ಜನ್ಮ ದಿನಾಚರಣೆ

September 29, 2018

ಮೈಸೂರು: ನಗರದ ಯುವ ಭಾರತ್ ಸಂಘಟನೆಯ ಎನ್.ಆರ್.ಕ್ಷೇತ್ರದ ಘಟಕದ ವತಿಯಿಂದ ತ್ರಿವೇಣಿ ವೃತ್ತದಲ್ಲಿ ಕ್ರಾಂತಿ ಕಾರಿ ಭಗತ್ ಸಿಂಗ್‍ರವರ 111ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಆಚರಿಸಲಾಯಿತು. ಈ ವೇಳೆ ಸಂಘಟನೆ ಸಂಚಾಲಕ ಆನಂದ್ ಮಾತನಾಡಿ, ಇಂದಿನ ಯುವ ಪೀಳಿಗೆ, ಕ್ರಾಂತಿ ಕಿಡಿಯಾದ ಭಗತ್ ಸಿಂಗ್‍ರವರ ಮಾರ್ಗ ದರ್ಶನದಂತೆ ನಡೆಯಬೇಕು. ಅವರ ದೇಶಪ್ರೇಮ ನಮಗೆ ಮಾದರಿ. ಇಂತಹ ಮಹಾನ್ ದೇಶಪ್ರೇಮಿಗಳು ಹುಟ್ಟುವುದೇ ಭಾರತಾಂಭೆಯ ಮಡಿಲಲ್ಲಿ. ಇಂತಹ ಮಹಾನ್ ಪುರುಷರ ಆಸೆಯಂತೆ ನಮ್ಮೆಲ್ಲರಿಗೂ ಇಂದು ಸ್ವಾತಂತ್ರ್ಯ ಸಿಕ್ಕಿದೆ ಎಂದು ತಿಳಿಸಿದರು..

ನಂತರ ನಗರ ಸಂಚಾಲಕ ಜೋಗಿ ಮಂಜು ಮಾತನಾಡಿ, ಇಂತಹ ಮಹಾನ್ ದೇಶ ಭಕ್ತ, ಕ್ರಾಂತಿಕಾರಿ ಭಗತ್ ಸಿಂಗ್‍ರವರ 111 ಜನ್ಮ ಜಯಂತಿಯಲ್ಲಿ ಭಾಗವಹಿಸಿರುವ ನಾವೆಲ್ಲರೂ ಧನ್ಯರು. ಬ್ರಿಟಿಷ್ ಸರ್ಕಾರವನ್ನು ಕಿತ್ತೊಗೆಯಲು ಶಾಂತಿಯುತವಾಗಿ ಮಹಾತ್ಮ ಗಾಂಧಿ ಹೋರಾಟ ಮಾಡುತ್ತಿದ್ದರೆ, ಅಷ್ಟೇ ಪ್ರಮಾಣದಲ್ಲಿ ಕ್ರಾಂತಿಕಾರಿಯಾಗಿ ಭಗತ್ ಸಿಂಗ್, ಸುಖದೇವ್, ರಾಜಗುರು ಹೋರಾಡಿದವರು. ಚಿಕ್ಕ ವಯಸ್ಸಿನಲ್ಲಿಯೇ ದೇಶದ ಬಗ್ಗೆ ಹೋರಾಡಿದ ವೀರ ಪುರುಷರು. ಇಂದಿನ ಯುವ ಪೀಳಿಗೆಗೆ ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ರಾಜ್ಯ ಸರ್ಕಾರ ಪಠ್ಯ ಪುಸ್ತಕದಲ್ಲಿ ಅಳವಡಿಸ ಬೇಕು. ಮೈಸೂರು ನಗರಪಾಲಿಕೆಯ ವ್ಯಾಪ್ತಿಯಲ್ಲಿ ಯಾವುದಾದರೂ ವೃತ್ತಕ್ಕೆ ಭಗತ್ ಸಿಂಗ್ ವೃತ್ತ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸಾತ್ವಿಕ್ ಸಂದೇಶ್, ಆನಂದ್, ಮುರುಳಿ, ಜೋಗಿ ಮಂಜು, ವಿಕ್ರಮ್ ಅಯ್ಯಂಗಾರ್, ಗೋಕುಲ್ ಗೊವರ್ದನ್, ಕೃಷ್ಣಮೂರ್ತಿ, ಮುರುಳಿ, ಕಿರಣ್, ಶಿವು, ಬಸವರಾಜ್, ಗೌಸ್ ಪಾಷ, ನಾಸೀರ್, ಗೊವಿಂದ, ಧನರಾಜ್, ಮಲ್ಲು, ರಾಜೇಶ್ ಇತರರು ಉಪಸ್ಥಿತರಿದ್ದರು.

Translate »