ಪ್ರತಿಕೂಲ ಸಾಕ್ಷಿ ನೀಡಿದವರ ವಿರುದ್ಧ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ
ಮೈಸೂರು

ಪ್ರತಿಕೂಲ ಸಾಕ್ಷಿ ನೀಡಿದವರ ವಿರುದ್ಧ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ

September 29, 2018

ಮೈಸೂರು:  ಮೈಸೂರಿನ ಪಡುವಾರಳ್ಳಿಯ ದೇವೇಂದ್ರ ಅಲಿಯಾಸ್ ದೇವು ಹತ್ಯೆ ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಹೇಳಿದ ಆರೋಪದಡಿ ಇಬ್ಬರ ವಿರುದ್ಧ ಪೊಲೀಸರು, ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದೇವು ಹತ್ಯೆ ಪ್ರಕರಣದ ಪ್ರತ್ಯಕ್ಷ ಸಾಕ್ಷೀದಾರರಾಗಿದ್ದ ಮುಕುಂದ ಹಾಗೂ ಪ್ರತಾಪ್, ನ್ಯಾಯಾಲಯ ದಲ್ಲಿ ಸುಳ್ಳು ಸಾಕ್ಷಿ ಹೇಳಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೆ.22ರಂದು ಸರ್ಕಾರದ ಪರವಾಗಿ ಅರ್ಜಿ ಸಲ್ಲಿಸಿರುವುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಮೈಸೂರಿನ ವಿನಾಯಕನಗರದ ಜೋಡಿ ಮಾರಮ್ಮನ ದೇವಸ್ಥಾನದ ಎದುರು, ಬಯಲು ರಂಗಮಂಟಪದ ಸಮೀಪ 2016ರ ಮೇ 5ರಂದು, ನಗರ ಪಾಲಿಕೆ ಮಾಜಿ ಸದಸ್ಯ ಸಿ.ಮಹದೇಶ ಅಲಿಯಾಸ್ ಅವ್ವಾ ಮಾದೇಶ ಹಾಗೂ ಅವರ ಸಹೋದರ ಮಂಜು ಚಿತಾವಣೆಯಿಂದ, ಪಡುವಾರಹಳ್ಳಿ ನಿವಾಸಿಗಳಾದ ಪವನ್‍ಕುಮಾರ್, ಕಾರ್ತಿಕ್ ಮತ್ತು ಸಹಚರರು, ಮಾರಕಾಸ್ತ್ರಗಳಿಂದ ದೇವು ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದರು. ಘಟನೆಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿನ ದ್ವೇಷ ಕಾರಣವಾಗಿತ್ತು.

ಈ ಸಂಬಂಧ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳು ಕೋಕಾ ಕಾಯ್ದೆಯನ್ವಯದ ಅಪರಾಧದಲ್ಲೂ ಭಾಗಿಯಾಗಿ ರುವುದು ದೃಢಪಟ್ಟಿದ್ದರಿಂದ ಒಟ್ಟು 29 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋ ಪಣೆ ಪಟ್ಟಿ ಸಲ್ಲಿಸಲಾಗಿತ್ತು. ತನಿಖೆ ಸಂದರ್ಭದಲ್ಲಿ ಸಾಕ್ಷೀದಾರರಾದ ಮುಕುಂದ ಹಾಗೂ ಪ್ರತಾಪ್ ಅವರ ಹೇಳಿಕೆಯನ್ನು ತನಿಖಾಧಿಕಾರಿ ದಾಖಲು ಮಾಡಿದ್ದರು. ದಂಡಾಧಿಕಾರಿ ನ್ಯಾಯಾಧೀಶರೂ ದಂಡ ಪ್ರಕ್ರಿಯೆ ಸಂಹಿತೆ ಕಲಂ:164ರನ್ವಯ ಸಾಕ್ಷಿದಾ ರರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ಸಾಕ್ಷೀದಾರರನ್ನು ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕರೆಸಿಕೊಂಡು, ಆರೋಪಿಗಳ ಗುರುತು ಪತ್ತೆ ಹಚ್ಚುವ ಕವಾಯತು ನಡಾವಳಿಯನ್ನೂ ದಾಖಲು ಮಾಡಿದ್ದರು. ಆದರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆ ಪ್ರಾರಂಭವಾಗಿದ್ದು, ಪ್ರತ್ಯಕ್ಷ ಸಾಕ್ಷಿದಾರರಾದ ಮುಕುಂದ ಮತ್ತು ಪ್ರತಾಪ್ ಇಬ್ಬರೂ ತಾವು ಘಟನೆಯಲ್ಲಿ ಆರೋಪಿತರನ್ನು ನೋಡಿಲ್ಲ ಎಂದು, ಈ ಹಿಂದೆ ನೀಡಿದ ಎಲ್ಲಾ ಹೇಳಿಕೆಗಳಿಗೆ ಪ್ರತಿಕೂಲವಾಗಿ ಸಾಕ್ಷಿ ನುಡಿದಿದ್ದಾರೆ. ನಂತರ ಇವರಿಬ್ಬರನ್ನೂ ಸರಕಾರಕ್ಕೆ ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಿ, ವಿಶೇಷ ಸರ್ಕಾರಿ ಅಭಿಯೋಜಕರಾದ ಸುದೀಪ್ ಬಂಗೇರಾ ಅವರು, ಪಾಟಿ ಸವಾಲು ಮಾಡಿದಾಗಲೂ ತಾವು ಹಿಂದೆ ನ್ಯಾಯಾಲಯ ಮತ್ತು ದಂಡಾಧಿಕಾರಿಯವರ ಮುಂದೆ ನೀಡಿರುವ ಹೇಳಿಕೆಗಳು ಸುಳ್ಳು ಎಂದಿದ್ದಾರೆ. ಹೀಗೆ ಸುಳ್ಳು ಸಾಕ್ಷಿ ನುಡಿದು ಕಾನೂನಿನ ಅನ್ವಯ ಅಪರಾಧ ಮಾಡಿರುವ ಕಾರಣ ಇವರ ವಿರುದ್ದ ದಂ.ಪ್ರ.ಸಂ ಕಲಂ: 340ರ ಅನ್ವಯ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ ಎಂದು ಪೊಲೀಸರ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

Translate »