ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ದೇಶ-ವಿದೇಶ

ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

September 24, 2018

ದುಬೈ: ನಾಯಕ ರೋಹಿತ್ ಶರ್ಮಾ(111) ಹಾಗೂ ಶಿಖರ್ ಧವನ್ (114) ಅವರ ಭರ್ಜರಿ ಶತಕದ ನೆರವಿನಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 9 ವಿಕೆಟ್‍ಗಳ ಭರ್ಜರಿ ಜಯಗಳಿಸಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆ ಏಷ್ಯಾ ಕಪ್ ಫೈನಲ್‍ಗೆ ಲಗ್ಗೆ ಹಾಕಿದೆ. ಪಾಕಿಸ್ತಾನ ನೀಡಿದ 237 ರನ್‍ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರ ತಕ್ಕೆ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಆರಂಭ ಒದಗಿಸಿದರು. ಪಾಕ್ ಬೌಲರ್‍ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಕ್ರೀಡಾಂಗಣದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದು ಮೊದಲ ವಿಕೆಟ್‍ಗೆ ದ್ವಿಶತಕದ ಜೊತೆಯಾಟವಾಡಿ 210ರನ್ ಪೇರಿಸಿತು.

ಪಂದ್ಯದಲ್ಲಿ ಪೈಪೋಟಿಗೆ ಬಿದ್ದವರಂತೆ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಇಬ್ಬರೂ ಶತಕ ಸಿಡಿಸಿ ಸಂಭ್ರಮಿಸಿದರು. ಶಿಖರ್ ಧವನ್ 100 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 114ರನ್ ಗಳಿಸಿ ಅನವಶ್ಯಕ ರನ್ ಕದಿಯಲು ಹೋಗಿ ರನೌಟ್ ಆಗಿ ವಿಕೆಟ್ ಒಪ್ಪಿಸಿದರು. ಇತ್ತ ರೋಹಿತ್ ಶರ್ಮಾ 119 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಅಮೋಘ ಸಿಕ್ಸರ್ ಸಿಡಿಸಿ 111ರನ್ ಗಳಿಸಿ ಅಜೇಯ ರಾಗಿ ಉಳಿದು ಭಾರತಕ್ಕೆ ಜಯ ತಂದಿತ್ತರು. ಅಲ್ಲದೇ ತಮ್ಮ ವೈಯಕ್ತಿಕ ಮೊತ್ತ 94 ರನ್ ಆಗಿದ್ದ ವೇಳೆ ಏಕದಿನ ಕ್ರಿಕೆಟ್‍ನಲ್ಲಿ 7 ಸಾವಿರ ರನ್ ಪೂರೈಸಿದರು. ಉಳಿದಂತೆ ಅಂಬಟಿ ರಾಯುಡು 12ರನ್ ಗಳಿಸಿದರು. ಅಂತಿಮ ವಾಗಿ ಭಾರತ 39.3 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು 238 ರನ್ ಗಳಿಸಿ ಗೆಲುವಿನ ನಗೆ ಬೀರುವ ಮೂಲಕ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ 2ನೇ ಜಯ ಸಾಧಿಸಿತು. ಆದರೆ ವಿಕೆಟ್ ಪಡೆಯುವಲ್ಲಿ ಪಾಕ್‍ನ ಎಲ್ಲಾ ಬೌಲರ್ ಗಳು ವಿಫಲರಾದರು.

ಇದಕ್ಕೂ ಮುನ್ನಾ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತೀಯ ಬೌಲರ್‍ಗಳ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 50 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 237ರನ್ ಗಳಿಸಿತು.

ಪಾಕಿಸ್ತಾನ ತಂಡದ ಮೊತ್ತ 58ರನ್ ಆಗುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಶೋಯೆಬ್ ಮಲ್ಲಿಕ್ ಹಾಗೂ ಸರ್ಫರಾಜ್ ಅಹಮದ್ 107ರನ್‍ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಶೋಯೆಬ್ ಮಲ್ಲಿಕ್ 4 ಬೌಂಡರಿ, 2 ಸಿಕ್ಸರ್ ಒಳಗೊಂಡ 78 ರನ್ ಗಳಿಸಿ ತಂಡದ ಮೊತ್ತ ಹೆಚ್ಚಲು ಕಾರಣರಾದರು. ಉಳಿದಂತೆ ವಿಕೆಟ್ ಕೀಪರ್ ಸಫರ್ ರಾಜ್ ಅಹಮದ್ 44, ಪಾಕರ್ ಜಾಮನ್ 31, ಅಸಿಫ್ ಆಲಿ 30 ರನ್ ಗಳಿಸಿದರು.

ಭಾರತದ ಪರ ಬೌಲಿಂಗ್‍ನಲ್ಲಿ ಜಸ್ಪ್ರೀತ್ ಬೂಮ್ರಾ, ಯುಜುರ್ವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಉರುಳಿಸಿದರು. ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ ಶಿಖರ್ ಧವನ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

Translate »