ಪೂಜ್ಯ ಭಾವನೆಗೆ  ಪಾತ್ರವಾಗುತ್ತಿದೆ ಆನೆ ಲದ್ದಿ
ಮೈಸೂರು

ಪೂಜ್ಯ ಭಾವನೆಗೆ ಪಾತ್ರವಾಗುತ್ತಿದೆ ಆನೆ ಲದ್ದಿ

September 24, 2018

ಮೈಸೂರು: ಗಣಪತಿಯ ನೈಜ ರೂಪ ಎಂದು ಪೂಜಿಸಲ್ಪಡುವ ಆನೆಗಳಂತೆ ಅವುಗಳ ಲದ್ದಿಯನ್ನೂ ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದ್ದು, ಔಷಧೀಯ ಗುಣಗಳನ್ನು ಹೊಂದಿರುವ ಆನೆ ಲದ್ದಿಗೆ ಎಲ್ಲಿಲ್ಲದ ಮಹತ್ವವಿದೆ.

ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಆವರಣ ದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ ದಸರಾ ಆನೆಗಳ ಲದ್ದಿಗೆ ಮೈಸೂರಿನ ಜನತೆ ಮುಗಿಬೀಳುತ್ತಿದ್ದು, ಮನೆಗಳಿಗೆ ಕೊಂಡೊಯ್ದು ಪೂಜಿಸುವುದಕ್ಕೆ ಹಂಬಲಿಸುತ್ತಿದ್ದಾರೆ.

ಅರಮನೆಯಿಂದ ಬನ್ನಿಮಂಟಪ ದವರೆಗೆ ತಾಲೀಮಿಗೆ ಬರುವ ಆನೆಗಳು ಮಾರ್ಗ ಮಧ್ಯೆ ಲದ್ದಿ ಹಾಕಿದ್ದಾಗ ಅದನ್ನು ಕೆಲವರು ಮನೆಗೆ ಕೊಂಡೊಯ್ಯಲು ಮುಂದಾದರೆ, ಮತ್ತೆ ಕೆಲವರು ಲದ್ದಿಗೆ ಮೇಲೆ ಬರಿಗಾಲಲ್ಲಿ ನಿಂತು ದೇಹದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳುವತ್ತ ಮುಂದಾಗುತ್ತಿದ್ದಾರೆ.

ಪೂಜೆ ಯಾಕೆ?: ಹಿಂದು ಸಂಪ್ರದಾಯದಲ್ಲಿ ಆನೆಗಳನ್ನು ನೈಜ ರೂಪದ ಗಣಪತಿ ಎಂದು ಭಾವಿಸಲಾಗುತ್ತಿದೆ. ಸಾಕಾನೆಗಳಿಗೆ ಗಣಪತಿ ಚತುರ್ಥಿಯ ದಿನದಂದು ಹೂ, ಹಣ್ಣು ಸಮರ್ಪಿಸಿ ಪೂಜಿಸುವ ವಾಡಿಕೆ ಇದೆ. ಈ ನಡುವೆ ಆನೆ ಲದ್ದಿಯನ್ನು ಮನೆಗೆ ಕೊಂಡೊಯ್ದು ದೇವರ ಮನೆಯಲ್ಲಿಟ್ಟು ಪೂಜಿಸಲಾಗುತ್ತದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಮೈಸೂರಿಗೆ ಬರುವ ಆನೆಗಳ ಲದ್ದಿಯನ್ನು ಪೂಜಿಸುವ ಪರಂಪರೆ ಹೊಂದಿರುವ ಜನರು ನಗರದಲ್ಲಿದ್ದಾರೆ. ಅದರಲ್ಲಿಯೂ ಜಂಬೂಸವಾರಿಯ ದಿನ ಚಿನ್ನದ ಅಂಬಾರಿಯನ್ನು ಹೊತ್ತ ಅರ್ಜುನನ ಲದ್ದಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗುತ್ತದೆ.

ಈ ಕುರಿತು ಮೈಸೂರಿನ ಜಯನಗರದ ನಿವಾಸಿ ಜಯಂತ್ ಎಂಬುವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಆನೆಗಳ ಲದ್ದಿಯನ್ನು ಮನೆಗೆ ತಂದು ದೇವರ ಮನೆಯಲ್ಲಿಟ್ಟು ಪೂಜಿಸಿದರೆ ಒಳಿತಾಗುತ್ತದೆ ಎಂಬ ಭಾವನೆ ಯನ್ನು ಹಿರಿಯರು ತಿಳಿಸಿದ್ದರು. ಇದರಿಂದ ಕಳೆದ ಕೆಲವು ವರ್ಷಗಳಿಂದ ಆನೆ ಲದ್ದಿಯನ್ನು ಒಂದು ಚಮಚವಷ್ಟಾದರೂ ತಂದು ದೇವರ ಮನೆಯಲ್ಲಿಟ್ಟು ಪೂಜಿಸುತ್ತೇವೆ. ಅದರಲ್ಲಿಯೂ ಗಣೇಶ ಚತುರ್ಥಿಯಂದು ಮನೆಯಲ್ಲಿ ಆನೆ ಲದ್ದಿಯನ್ನು ಪೂಜಿಸಿದರೆ, ಕಷ್ಟ ಕಾರ್ಪಣ್ಯಗಳು ದೂರವಾಗಿ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತದೆ ಎಂಬ ನಂಬಿಕೆ ನಮ್ಮಲಿದೆ. ಪೂಜೆಯ ನಂತರ ಲದ್ದಿಯನ್ನು ಹರಿಯುವ ನೀರು ಅಥವಾ ತೆಂಗಿನ ಮರದ ಬುಡಕ್ಕೆ ಇಡುತ್ತೇವೆ ಎಂದು ಅವರು ತಿಳಿಸಿದರು.

ಔಷಧೀಯ ಗುಣ: ಆನೆ ಲದ್ದಿಯಲ್ಲಿ ಔಷಧೀಯ ಗುಣವಿದೆಯಂದು ಜನತೆ ನಂಬಿದ್ದಾರೆ. ಮೊಣಕಾಲಿನಲ್ಲಿ ಹುಣ್ಣು, ಬೊಬ್ಬೆ ಹೊಂದಿ ರುವವರು ಆನೆ ಲದ್ದಿಯ ಮೇಲೆ ನಿಂತರೆ ಗುಣವಾಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಇದಕ್ಕೆ ಕಾರಣ ಆನೆಯ ಲದ್ದಿ ಬಿಸಿಯಾಗಿದ್ದು, ಅದರ ಮೇಲೆ ನಿಂತರೆ ಹುಣ್ಣು ಮತ್ತು ಬೊಬ್ಬೆಗಳು ವಾಸಿಯಾಗಿಲಿವೆ. ಇದರಿಂದ ಅಂತಹ ಸಮಸ್ಯೆ ಎದುರಿಸುತ್ತಿರುವವರು ಸಾರಾಗವಾಗಿ ನಡೆಯಲು ಸಾಧ್ಯವಾಗುತ್ತದೆ. ಇದರೊಂದಿಗೆ ಅತಿಯಾದ ಉಷ್ಣತೆ ಹೊಂದಿರುವವರು ಲದ್ದಿಯ ಮೇಲೆ ನಿಂತು ದೇಹವನ್ನು ತಂಪಾಗಿಸಿ ಕೊಳ್ಳಬಹುದು. ಇದಕ್ಕಾಗಿ ಲದ್ದಿಯ ಮೇಲೆ ಜನರು ಬರಿಗಾಲಲ್ಲಿ ನಿಲ್ಲುವುದಕ್ಕೆ ಹಂಬಸುತ್ತಾರೆ.

ಲದ್ದಿಯ ಪರೀಕ್ಷೆ: ದಸರಾ ಆನೆಗಳ ಪಶು ವೈದ್ಯರ ಸಹಾಯಕರಾಗಿ ಸೇವೆ ಸಲ್ಲಿಸಿ ಕಳೆದ ತಿಂಗಳಷ್ಟೇ ನಿವೃತ್ತಿಯಾಗಿರುವ ರಂಗರಾಜು ಅವರು ಪ್ರತಿದಿನ ಆನೆಗಳ ಲದ್ದಿ ಪರೀಕ್ಷಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ರಂಗರಾಜು ಅವರ ಸೇವೆಯನ್ನು ಪರಿಗಣಿಸಿ ನಿವೃತ್ತಿಯಾದರೂ ಅವರ ಸೇವೆಯನ್ನು ಮುಂದುವರಿಸಿದೆ. ಪ್ರತಿದಿನ ಎರಡು ಬಾರಿ ದಸರಾ ಆನೆಗಳ ಲದ್ದಿ ಪರೀಕ್ಷಿಸುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಆನೆಗಳ ಲದ್ದಿಯನ್ನು ಪರೀಕ್ಷಿಸಲಾಗುತ್ತದೆ. ಇದರಿಂದಲೇ ಆನೆಗಳ ಆರೋಗ್ಯ ಸ್ಥಿತಿ ತಿಳಿಯುತ್ತದೆ.

– ಎಂ.ಟಿ.ಯೋಗೇಶ್ ಕುಮಾರ್

Translate »