ದೇವರು ಕೊಟ್ಟ ಅಧಿಕಾರವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ
ಮೈಸೂರು, ಹಾಸನ

ದೇವರು ಕೊಟ್ಟ ಅಧಿಕಾರವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ

September 24, 2018

ಹಾಸನ: ನನಗೆ ಮುಖ್ಯಮಂತ್ರಿಯಾಗಿ ದೇವರು ಕೊಟ್ಟಿರುವ ಅಧಿಕಾರವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ 1,650 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿಯ ನಾಲ್ಕೈದು ನಾಯಕರು ಸಮ್ಮಿಶ್ರ ಸರ್ಕಾರ ಉರುಳಿಸುವ ಚಿಂತೆಯಲ್ಲಿದ್ದಾರೆ. ಇವರಿಂದ ನನ್ನ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ನನಗೆ ಎರಡನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದಾಗ ಬದುಕಿದ್ದರೆ ಅದು ಜನರ ಆಶೀರ್ವಾದದಿಂದ. ಹಾಗಾಗಿ ನಿಮ್ಮ ಸಾಲಮನ್ನಾ ಮಾಡುವ ಮೂಲಕ ನಿಮ್ಮ ಋಣ ತೀರಿಸಲೆಂದೇ ನನಗೆ ಪುನರ್ಜನ್ಮ ಸಿಕ್ಕಿದೆ. ರಾಜ್ಯದ ಜನರೇ ನಿಮ್ಮ ಸಮಸ್ಯೆ ಬಗೆ ಹರಿಸದಿದ್ದರೆ, ನಿಮ್ಮನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ನಾನೇ ಅಧಿ ಕಾರಿದಿಂದ ಕೆಳಗಿಳಿಯುತ್ತೇನೆ. ರಾಜ್ಯದ ಜನರೇ ನೀವು ನನ್ನನ್ನು ನಂಬಿ ಎಂದು ಮನವಿ ಮಾಡಿದರು. ಜನತಾ ದರ್ಶನದಲ್ಲಿ ಸಾಲ ಮನ್ನಾ ಮಾಡುವಂತೆ ಸಹಾಯ ಕೋರಿ
ಮಂಡ್ಯದ ದಂಪತಿಗಳು ನನ್ನ ಬಳಿ ಬಂದಿದ್ದರು. ನಾನು ಅವರಿಗೆ ಭರವಸೆ ನೀಡಿದ್ದೆ. ಆದರೆ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮರುಗಿದರಲ್ಲದೆ, ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ದಾರಿಯಲ್ಲ. ಸಂಯಮದಿಂದ ಇರುವ ಮೂಲಕ ನನಗೆ ಸ್ವಲ್ಪ ಕಾಲಾವಕಾಶ ಕೊಟ್ಟರೆ ನಿಮ್ಮ ಎಲ್ಲಾ ಸಮಸ್ಯೆಗಳನ್ನೂ ನಾನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಸಿಎಂ ರೈತರಿಗೆ ಆತ್ಮಸ್ಥೈರ್ಯ ತುಂಬಿದರು.

ಇನ್ನು ಕೇಂದ್ರ ಸರ್ಕಾರದ ಕಾರ್ಯ ವೈಖರಿಯಿಂದ ಪೆಟ್ರೋಲ್ ಉತ್ಪನ್ನಗಳ ಬೆಲೆ ಹೆಚ್ಚಳ ಆಗಿದೆ. ತೈಲ ಉತ್ಪನ್ನಗಳಗಳನ್ನು ಕಡಿಮೆ ದರದಲ್ಲಿ ನೀಡುತ್ತಿರುವ ಸರ್ಕಾರ ಎಂದರೆ ಅದು ನಮ್ಮ ರಾಜ್ಯ ಮಾತ್ರ. ಇದಕ್ಕೆ ಯಾರೂ ಪ್ರಚಾರ ನೀಡುತ್ತಿಲ್ಲ ಎಂದ ಸಿಎಂ, ಬಿಜೆಪಿಯವರು ಕನಿಷ್ಠ ಸೌಜನ್ಯಕ್ಕೂ ಇದನ್ನು ಒಪ್ಪಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಾತನಾಡಿ, ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದಿಲ್ಲ, ಸರ್ಕಾರ ಬೀಳುವುದು ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಉಳಿಸುವ ಭರವಸೆ ನೀಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಕೆಲ ಭಿನ್ನಾಭಿಪ್ರಾಯದಿಂದ ಸಿದ್ದರಾಮಯ್ಯ ಅಂದು ಕಾಂಗ್ರೆಸ್ ಸೇರಿದರು. ಸಿದ್ದರಾಮಯ್ಯ ಮತ್ತು ನಾನು ಒಂದು ಕಾಲದಲ್ಲಿ ಸ್ನೇಹಿತರಾಗಿದ್ದೆವು ಎಂದು ತಮ್ಮ ಹಳೆ ನೆನಪು ಮೆಲುಕು ಹಾಕಿದರು. ವಿಪಕ್ಷ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪ ತರಾತುರಿಯಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರೂ ಫಲಪ್ರದವಾಗಲಿಲ್ಲ. ಇದರಿಂದ ಅವರಿಗೆ ಸಮ್ಮಿಶ್ರ ಸರ್ಕಾರದ ಮೇಲೆ ಸಿಟ್ಟಿದೆ ಎಂದ ಗೌಡರು, ಅಂದಿನ ಬಿಜೆಪಿಯ ನಾಯಕ ಅಟಲ್ ಬಿಹಾರಿ ವಾಜಪೇಯಿಯವರು ಸದನದಲ್ಲಿ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಯಡಿಯೂರಪ್ಪ ಇದಕ್ಕೆ ತದ್ವಿರುದ್ಧವಾಗಿದ್ದಾರೆ ಎಂದು ಹೇಳುವ ಮೂಲಕ ವಾಜಪೇಯಿಯಂತೆ ಸದನದಲ್ಲಿ ಗಾಂಭೀರ್ಯದಿಂದರಲು ಯಡ್ಡಿಯೂರಪ್ಪಗೆ ಪರೋಕ್ಷವಾಗಿ ಟಾಂಗ್ ನೀಡಿದರು.

Translate »