ಇಂದು ಸ್ವಸ್ಥಾನಗಳಿಗೆ ಮರಳಲಿರುವ ಜಂಬೂ ಸವಾರಿ ಯಶಸ್ಸಿನ ರೂವಾರಿಗಳು
ಮೈಸೂರು, ಮೈಸೂರು ದಸರಾ

ಇಂದು ಸ್ವಸ್ಥಾನಗಳಿಗೆ ಮರಳಲಿರುವ ಜಂಬೂ ಸವಾರಿ ಯಶಸ್ಸಿನ ರೂವಾರಿಗಳು

October 21, 2018

ಮೈಸೂರು: ಅಪಾರ ಸಂಖ್ಯೆಯ ಜನಸಾಗರದ ನಡುವೆ ಜಂಬೂಸವಾರಿ ಮೆರವಣಿಗೆಯಲ್ಲಿ ಯಶಸ್ವಿ ಯಾಗಿ ಹೆಜ್ಜೆ ಹಾಕಿದ್ದ ಅರ್ಜುನ ನೇತೃ ತ್ವದ ಗಜಪಡೆ ನಾಳೆ (ಭಾನುವಾರ) ಸ್ವಸ್ಥಾನಗಳಿಗೆ ಮರಳಲಿದೆ. ಜಂಬೂ ಸವಾರಿ ಮಾರನೇ ದಿನವಾದ ಶನಿವಾರ ಇಡೀ ದಿನ ರಿಲ್ಯಾಕ್ಸ್ ಮೂಡ್‍ನಲ್ಲಿತ್ತು.

ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಸೆ.2ರಂದು ಹುಣಸೂರು ತಾಲೂ ಕಿನ ವೀರನಹೊಸಳ್ಳಿಯಿಂದ ಗಜಪಡೆಯ ನಾಯಕ ಅರ್ಜುನ ನೇತೃತ್ವದಲ್ಲಿ ಆರು ಆನೆ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಬಂದು ಬೀಡು ಬಿಟ್ಟು, ಸೆ.5 ರಂದು ಅರಮನೆಯ ಆವರಣ ಪ್ರವೇಶಿ ಸಿದ್ದವು. ಸೆ.14ರಂದು ಬಲರಾಮ ನೇತೃ ತ್ವದ ಆರು ಆನೆ ವಿವಿಧ ಕ್ಯಾಂಪ್‍ಗಳಿಂದ ಮೈಸೂರಿನ ಅರಮನೆ ಆವರಣಕ್ಕೆ ಬಂದಿ ದ್ದವು. ಕಳೆದ 45 ದಿನಗಳಿಂದ ಈ ಆನೆಗಳಿಗೆ ದಿನಕ್ಕೆ ಎರಡು ಬಾರಿ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಈಗಾಗಲೇ ಎಲ್ಲಾ ಆನೆ ಗಳು ತಮ್ಮ ತೂಕವನ್ನು ಹೆಚ್ಚಿಸಿಕೊಂಡಿವೆ.

ಅ.19ರಂದು ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿ, ದಸರಾ ಮಹೋತ್ಸವವನ್ನು ಯಶಸ್ವಿಯಾಗಿಸಿವೆ. ಆನೆಗಳು ತಮ್ಮ  ಜವಾಬ್ದಾರಿಯನ್ನು ಮುಗಿಸಿದ್ದರಿಂದ ಇಂದು ಅರಮನೆಯ ಆವರಣ ಬಿಟ್ಟು ದಸರಾ ಆನೆಗಳು ಎಲ್ಲಿಗೂ ಕದಲಲಿಲ್ಲ. ಎಲ್ಲಾ ಆನೆಗಳಿಗೂ ಮಾವುತರು ಮತ್ತು ಕಾವಾಡಿಗಳು ಸ್ನಾನ ಮಾಡಿಸಿ, ಹಸಿ ಹುಲ್ಲು ನೀಡಿ ಆರೈಕೆ ಮಾಡಿದರು.

ಜನಜಂಗುಳಿ: ಅರಮನೆ ಆವರಣಕ್ಕೆ ದಸರಾ ಆನೆಗಳನ್ನು ನೋಡುವುದಕ್ಕಾಗಿ ಬರುವ ಜನರ ಸಂಖ್ಯೆ ಶನಿವಾರವೂ ಅಧಿಕವಾಗಿತ್ತು. ಅರಮನೆಗೆ ಆಗಮಿಸಿದ್ದ ಪ್ರವಾಸಿಗರು ಆನೆಗಳ ಬಳಿ ನಿಂತು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ದಸರಾದ 12 ಆನೆಗಳಲ್ಲಿ ಅರ್ಜುನ, ಬಲರಾಮ ಆನೆಯನ್ನು ನೋಡಲು ಜನರು ಕಾತುರ ವ್ಯಕ್ತಪಡಿಸುತ್ತಿದ್ದರು. ಪೊಲೀಸರು ಆನೆಗಳ ಸಮೀಪ ತೆರಳುತ್ತಿದ್ದ ಪ್ರವಾಸಿ ಗರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಹಲ್ಲೆಗೆ ಮುಂದಾಗಿದ್ದ ದುರುಳರು: ಆನೆಯ ಸಮೀಪ ಯಾರೂ ಬರದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಗ್ಗ ಕಟ್ಟಿದ್ದರು. ಮೂವರು ಯುವಕರು ಬಲರಾಮನ ಬಳಿ ತೆರಳಿದ್ದಾರೆ. ಇದಕ್ಕೆ ಮಾವುತ ತಿಮ್ಮ ಆಕ್ಷೇಪಿಸಿ ಆನೆಯ ಬಳಿ ಬರದಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಯುವಕನೊಬ್ಬ ಮಾವುತರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕೂಡಲೇ ಪ್ರವಾಸಿಗರು ಹಾಗೂ ಇತರೆ ಮಾವುತರು, ಯುವಕನನ್ನು ಹಿಡಿಯಲು ಯತ್ನಿಸಿದರಾದರೂ ಆತ ಪರಾರಿಯಾಗಿದ್ದಾನೆ.

ಒಡವೆಗಳು ಅರಮನೆಯ ಸುಪರ್ದಿಗೆ: ಜಂಬೂ ಸವಾರಿ ವೇಳೆ ಆನೆಗಳಿಗೆ ಧರಿಸಿದ್ದ ವಿವಿಧ ಆಭರಣಗಳನ್ನು ಶನಿವಾರ ಅರಮನೆಯ ಸುಪರ್ದಿಗೆ ಒಪ್ಪಿಸಲಾಯಿತು. ಈ ಆಭರಣಗಳನ್ನು ಶುಕ್ರವಾರ ರಾತ್ರಿಯೇ ಬಿಚ್ಚಿಡಲಾಗಿತ್ತು.

ಇಂದು ಸ್ವಸ್ಥಾನಕ್ಕೆ: ನಾಳೆ(ಅ.20) ಬೆಳಿಗ್ಗೆ 11ಕ್ಕೆ ಸ್ವಸ್ಥಾನಗಳಿಗೆ ಗಜಪಡೆ ಪ್ರಯಾಣ ಬೆಳೆಸಲಿವೆ. ಈ ಬಾರಿ 12 ಆನೆಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲಾ ಆನೆ, ಅವುಗಳ ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರನ್ನು ಭಾನುವಾರ ಸತ್ಕರಿಸಿ ಬೀಳ್ಕೊಡಲಿದ್ದಾರೆ. ನಂತರ ಲಾರಿಗಳ ಮೂಲಕ ಆನೆಗಳನ್ನು ಅವುಗಳ ಕ್ಯಾಂಪ್‍ಗಳಿಗೆ ಸಾಗಿಸಲಾಗುತ್ತದೆ.

Translate »