ಅರಮನೆಯಲ್ಲಿ ನಾಳೆ ವಿಜಯದಶಮಿ ಆಚರಣೆ
ಮೈಸೂರು, ಮೈಸೂರು ದಸರಾ

ಅರಮನೆಯಲ್ಲಿ ನಾಳೆ ವಿಜಯದಶಮಿ ಆಚರಣೆ

October 21, 2018

ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲಾಗಿದ್ದ ವಜ್ರಮುಷ್ಠಿ ಕಾಳಗ, ಶಮಿಪೂಜೆ ಹಾಗೂ ವಿಜಯಯಾತ್ರೆ(ವಿಜಯದಶಮಿ)ಯನ್ನು ಅ.22ರಂದು ಅರಮನೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವಾಗ ರಾಜಮನೆತನದವರು ಕೆಲವು ಕಟ್ಟುಪಾಡುಗಳನ್ನು ಅನುಸರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯ ಪೂಜಾ ಸಂದರ್ಭದಲ್ಲಿ ಅರಮನೆಯ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಸಿದ ನಂತರ ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ದೇವಾಲಯಕ್ಕೆ ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿಯನ್ನು ಇಟ್ಟು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಳ್ಳಿ ರಥದಲ್ಲಿ ಕುಳಿತು ತೆರಳಿ ಶಮಿ ಪೂಜೆಯನ್ನು ಮಾಡಿ, ಬಳಿಕ ಅರಮನೆಗೆ ವಿಜಯಯಾತ್ರೆ ಬರುವ ಸಂಪ್ರದಾಯವಿದೆ.

ಈ ಕುರಿತು ಪ್ರಮೋದಾದೇವಿ ಒಡೆಯರ್ ಅವರು `ಮೈಸೂರು ಮಿತ್ರ’ನೊಂದಿಗೆ ಶನಿವಾರ ಮಾತನಾಡಿ, ತಾಯಿ ಪುಟ್ಟರತ್ನಮ್ಮಣ್ಣಿ ಅವರ ನಿಧನದಿಂದಾಗಿ ಶುಕ್ರವಾರ ನಡೆಯಬೇಕಾಗಿದ್ದ ದಸರಾ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ರಾಜಮನೆತನದ ಗುರುಗಳು ಹಾಗೂ ರಾಜಪುರೋಹಿತರ ಸಲಹೆಯ ಮೇರೆಗೆ ಅ.22ರಂದು ವಜ್ರಮುಷ್ಠಿ ಕಾಳಗ, ಶಮಿ ಪೂಜೆ, ವಿಜಯ ಯಾತ್ರೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

400 ವರ್ಷದ ನಂತರ: ದಸರಾ ಮಹೋತ್ಸವದ ವೇಳೆಯಲ್ಲೇ ಯದುವಂಶದಲ್ಲಿ ಸಾವು ಸಂಭವಿಸಿದೆ. ಅಂಥ ಘಟನೆ 400 ವರ್ಷಗಳ ಬಳಿಕ ಸಂಭವಿಸಿದೆ. ಈ ಕುರಿತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾಹಿತಿ ನೀಡಿದ್ದು, 1610ರಲ್ಲಿ ಆಯುಧಪೂಜೆಯ ದಿನದಂದು ರಾಜ ಒಡೆಯರ್ ಅವರ ಪುತ್ರ ಮೃತಪಟ್ಟಿದ್ದರು. ಅದಾದ ಬಳಿಕ ಈಗ ರಾಜವಂಶಸ್ಥರ ಸಾವು ದಸರಾ ವೇಳೆ ಸಂಭವಿಸಿದೆ ಎಂದು ಅವರು ವಿವರ ನೀಡಿದರು.

Translate »