ಅಂತರರಾಷ್ಟ್ರೀಯ ಮಟ್ಟಕ್ಕೆ ಮೈಸೂರು ವಿಮಾನ ನಿಲ್ದಾಣ
ಮೈಸೂರು

ಅಂತರರಾಷ್ಟ್ರೀಯ ಮಟ್ಟಕ್ಕೆ ಮೈಸೂರು ವಿಮಾನ ನಿಲ್ದಾಣ

October 21, 2018

ಬೆಂಗಳೂರು: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಅಂತಾ ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಭೂಮಿಯನ್ನು ಮೂರು ತಿಂಗಳೊಳಗಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ.

ವಿಶ್ವ ವಿಖ್ಯಾತ ದಸರಾ ನಾಡಹಬ್ಬ ವೀಕ್ಷಣೆಗೆ ಪತ್ನಿ ಸಮೇತ ಆಗಮಿಸಿದ ಕೇಂದ್ರ ವಿಮಾನ ಯಾನ ಸಚಿವ ಸುರೇಶ್ ಪ್ರಭು ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆ ಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಭರವಸೆ ನೀಡಿದ್ದಾರೆ.

ಪ್ರಭು ಸಲಹೆಯಂತೆ ವಿಮಾನಯಾನ ಇಲಾಖೆ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಅಗತ್ಯ ವಿರುವ 300 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಸ್ಥಳದಲ್ಲೇ ರಾಜ್ಯ ಸರ್ಕಾರದ ಭರವಸೆಗೆ ಸ್ಪಂದಿಸಿದ ಪ್ರಭು ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಈ ವಿಮಾನ ನಿಲ್ದಾಣವನ್ನು ಪರಿವರ್ತಿಸಲು ತಾವು ಸಮರೋಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಮುಗಿಸಿ ಕೊಡುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರದ ಮತ್ತೊಂದು ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಮಾನ ನಿಲ್ದಾಣ ಪರಿವರ್ತನೆಗೆ ಸಿದ್ಧಗೊಂಡಿದ್ದ ನಕ್ಷೆಯಲ್ಲಿ ಕೆಲವು ಮಾರ್ಪಾಟು ಮಾಡಲು ಸಮ್ಮತಿಸಿದ್ದಾರೆ. ಅದ ರಂತೆ ನಂಜನಗೂಡಿನ ಸಮೀಪದ ಮಸ್ಕಿ ಗ್ರಾಮದ 30 ಎಕರೆ ಭೂಮಿಯನ್ನು ಭೂ ಸ್ವಾಧೀನ ಕಾರ್ಯದಿಂದ ಕೈ ಬಿಟ್ಟು ಅದಕ್ಕೆ ತತ್ಸಮಾನವಾದ ಭೂಮಿಯನ್ನು ನೆರೆಯ ಪ್ರದೇಶದಲ್ಲಿ ಪಡೆಯುವುದು.
ಹೊಸ ನಕ್ಷೆಗೆ ಅನುಕೂಲವಾಗುವಂತೆ ಭೂ ಸ್ವಾಧೀನ ಕಾರ್ಯ ಮಾಡಲು ಪ್ರಭು ಅವರು ಸಮ್ಮತಿಸಿರುವುದಲ್ಲದೆ ರಾಜ್ಯ ಸರ್ಕಾರ ಎಷ್ಟು ತ್ವರಿತಗತಿಯಲ್ಲಿ ನಮಗೆ ಭೂಮಿ ಹಸ್ತಾಂತರಿಸುತ್ತದೆಯೋ ಅಷ್ಟೇ ವೇಗವಾಗಿ ನಾವು ಕಾಮಗಾರಿ ಮುಗಿಸಿಕೊಡುವ ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕೇವಲ ಮೈಸೂರು ವಿಮಾನ ನಿಲ್ದಾಣವಲ್ಲದೆ ರಾಜ್ಯದ ಇತರೆ ವಿಮಾನ ನಿಲ್ದಾಣಗಳ ಪ್ರಸ್ತಾಪ ಮತ್ತು ಮೂಲ ಸೌಕರ್ಯ ಅಭಿವೃಧ್ಧಿ ಕಲ್ಪಿಸುವ ಸಂಬಂಧ ಸ್ಥಳದಲ್ಲೇ ಹಸಿರು ನಿಶಾನೆ ತೋರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಂಡಕಳ್ಳಿ ವಿಮಾನ ನಿಲ್ದಾಣ ಆರಂಭಗೊಂಡ ನಂತರ ಪ್ರಯಾಣಿಕರಿಲ್ಲದೆ ವಿಮಾನ ಹಾರಾಟ ಬಹಳಷ್ಟು ಬಾರಿ ಆರಂಭಗೊಂಡು, ನಂತರ ಸ್ಥಗಿತಗೊಂಡಿದೆ.

ಅಂತಾರಾಷ್ಟ್ರೀಯ ಮಟ್ಟಕ್ಕೆ ಈ ನಿಲ್ದಾಣವನ್ನು ವಿಸ್ತರಿಸುವುದರಿಂದ ವಾಣಿಜ್ಯ ನಗರಗಳ ವಿಮಾನ ಹಾರಾಟದ ಸಂದರ್ಭದಲ್ಲಿ ಮೈಸೂರು ನಗರದ ಮೂಲಕ ಹಾದು ಹೋಗಲು ಅವಕಾಶ ದೊರೆಯುತ್ತದೆ. ಇದರಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುವುದಲ್ಲದೆ ಸಾಂಸ್ಕøತಿಕ ನಗರಿಯಿಂದಲೇ ರಾಷ್ಟ್ರ ಮತ್ತು ವಿಶ್ವದ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಕಲ್ಪಿಸಲು ಅವಕಾಶ ದೊರೆಯುತ್ತದೆ.

Translate »