ಮೈಸೂರು: ಅದ್ಧೂರಿ ಜಂಬೂ ಸವಾರಿ ಮೆರವಣಿಗೆಯೊಂದಿಗೆ 10 ದಿನಗಳ ಮೈಸೂರು ದಸರಾ ಮಹೋತ್ಸವ ಶುಕ್ರವಾರವಷ್ಟೇ ಮುಕ್ತಾಯ ಗೊಂಡಿರುವುದರಿಂದ ಹೊರಗಿನಿಂದ ಬಂದಿರುವ ಪ್ರವಾಸಿಗರು ಕೆಆರ್‌ಎಸ್‌ನತ್ತ ಮುಖಮಾಡಿದ್ದಾರೆ.
ದಸರೆ ವೀಕ್ಷಿಸಲೆಂದು ಮೈಸೂರಿಗೆ ಆಗಮಿಸಿರುವ ಪ್ರವಾಸಿ ಗರು ವೀಕೆಂಡ್ ಕಳೆಯಲು ಸುತ್ತಲಿನ ಪ್ರವಾಸಿ ತಾಣ ಗಳಿಗೆ ತೆರಳುತ್ತಿದ್ದಾರೆ. ಆಯುಧ ಪೂಜೆ ದಿನ (ಅ.18) ಕೆಆರ್‌ಎಸ್‌ಗೆ 19 ಸಾವಿರ ಮಂದಿ ಹಾಗೂ ವಿಜಯ ದಶಮಿ ದಿನ (ಅ.19) 22 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು. ಇಂದು (ಶನಿವಾರ) ಮತ್ತು ನಾಳೆ (ಭಾನುವಾರ) 30ರಿಂದ 35,000 ಮಂದಿ ಭೇಟಿ ನೀಡು ವರೆಂದು ನಿರೀಕ್ಷಿಸಲಾಗಿದೆ. ದಸರಾ ಮಹೋತ್ಸವದ ಅಂಗವಾಗಿ ಕೆಆರ್‌ಎಸ್ ಅಣೆಕಟ್ಟು ಮತ್ತು ಬೃಂದಾ ವನದಲ್ಲಿ 3ಡಿ ಮ್ಯಾಪಿಂಗ್, ಸೌಂಡ್ ಅಂಡ್ ಲೈಟಿಂಗ್ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವ ಕೆಆರ್‌ಎಸ್ ಹಾಗೂ ಬೃಂದಾವನದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರತೀ ದಿನ ಸಾವಿರಾರು ಮಂದಿ ತೆರಳುತ್ತಿರುವುದರಿಂದ ಕಾವೇರಿ ನೀರಾವರಿ ನಿಗಮ ನಿಯಮಿತಕ್ಕೆ ಅದಾಯ ಬರುತ್ತಿದೆ.
ಕಳೆದ ಆಗಸ್ಟ್ ಮಾಹೆಯಲ್ಲಿ ಒಳಹರಿವು ಹೆಚ್ಚಾ ಗಿದ್ದರಿಂದ ಜಲಾಶಯದಿಂದ ಕಾವೇರಿ ನದಿಗೆ ಅಧಿಕ ಪ್ರಮಾಣದ ನೀರನ್ನು ಹೊರಗೆ ಬಿಟ್ಟಿದ್ದಾಗ ಬೋರ್ಗ ರೆಯುವ ಜಲಧಾರೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿದ್ಯುತ್ ಅಲಂಕಾರ ಮಾಡಿದ್ದನ್ನು ವೀಕ್ಷಿಸಲು ಜನರು ಕೆಆರ್‌ಎಸ್ ಗೆ ಮುಗಿಬೀಳುತ್ತಿದ್ದು ದನ್ನು ಇಲ್ಲಿ ಸ್ಮರಿಸಬಹುದು. ವೀಕೆಂಡ್‍ನಲ್ಲಿ ಸರಣಿ ರಜೆ ಸಿಕ್ಕಿದ್ದರಿಂದ ಮೈಸೂರಲ್ಲಿ ವಾಸ್ತವ್ಯ ಹೂಡಿರುವ ಪ್ರವಾಸಿಗರು. ಚಾಮುಂಡಿಬೆಟ್ಟ, ಮೃಗಾಲಯ, ಜಗನ್ಮೋಹನ ಅರಮನೆ, ಅಂಬಾ ವಿಲಾಸ ಅರಮನೆ, ವಸ್ತು ಪ್ರದರ್ಶನ, ನಂಜನಗೂಡು, ಶ್ರೀರಂಗಪಟ್ಟಣ ಗಳಂತಹ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಿದ್ದಾರೆ.