ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ಮಟ್ಟ ಹಾಕಲು ಕರ್ನಾಟಕ ದಿಂದಲೇ ಜಾತ್ಯಾತೀತ ಶಕ್ತಿಗಳು ಒಂದಾಗಿ ಹೋರಾಟ ಮಾಡಲು ಭೂಮಿಕೆ ಸಿದ್ಧಗೊಂಡಿದೆ.
ಹಾವು ಮುಂಗುಸಿಯಂತೆ ಬೆನ್ನ ಹಿಂದೆಯೇ ರಾಜಕೀಯ ಮಾಡುತ್ತಿದ್ದ ಹಾಗೂ ಕಡುವೈರಿಗಳೆಂದೇ ಬಣ್ಣಿಸಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಬಿಜೆಪಿಯ ವಿರುದ್ಧ ಸಮರ ಸಾರಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ 3 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ಬಿಜೆಪಿಯ ವಿರುದ್ಧ ವಿಜಯ ಪತಾಕೆ ಹಾರಿಸಿ ರಾಷ್ಟ್ರೀಯ ಮಟ್ಟಕ್ಕೆ ಸಂದೇಶ ರವಾನಿಸು ವುದಾಗಿ ಹೇಳಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಐತಿಹಾಸಿಕ ಪ್ರಕಟಣೆಗೆ ಸಾಕ್ಷಿಯಾದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆಯಂತೆ ಇಂದು ನಗರದಲ್ಲಿ ಹನ್ನೆರಡು ವರ್ಷಗಳ ನಂತರ ಸಿದ್ದ ರಾಮಯ್ಯ, ಜೆಡಿಎಸ್ ಅಧಿನಾಯಕ ದೇವೇಗೌಡರ ಜೊತೆ ಗೂಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರದ ಭವಿಷ್ಯಕ್ಕಾಗಿ, ಬಡವರು ಮತ್ತು ರೈತರ ಕಲ್ಯಾಣಕ್ಕಾಗಿ ನಾವು ನಮ್ಮಲ್ಲಿರುವ ಹಿಂದಿನ ಎಲ್ಲಾ ಕಹಿ ಅನುಭವ ಮರೆತು ಮುಂದಿನ ಪೀಳಿಗೆಗಾಗಿ ಒಂದಾಗಿ ಹೋರಾಟ ನಡೆಸು ತ್ತೇವೆ ಎಂದು ಗೌಡರು ಪ್ರಕಟಿಸಿದರು.
ನಡೆಯುತ್ತಿರುವ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಗೆಲುವು ಸಾಧಿಸಿ, ಬಿಜೆಪಿಗೆ ತಕ್ಕ ಪಾಠ ಕಲಿಸುವುದೇ ನಮ್ಮ ಉದ್ದೇಶ. ಇದಕ್ಕಾಗಿ ಜಂಟಿಯಾಗಿ ಚುನಾವಣಾ ಪ್ರಚಾರ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಿ ಸ್ಥಳೀಯವಾಗಿ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಇರುವ ಗೊಂದಲ ನಿವಾರಿಸಿ, ವಿಶ್ವಾಸ ತುಂಬುತ್ತೇವೆ.
ಅಕ್ಟೋಬರ್-30 ರಂದು ಶಿವಮೊಗ್ಗದಲ್ಲಿ ಜರುಗಲಿರುವ ಬೃಹತ್ ಸಮಾವೇಶದಲ್ಲಿ ನಾವು ಜಂಟಿಯಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುತ್ತೇವೆ. ದಿವಂಗತ ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ನಾನು ಸಿದ್ದರಾಮಯ್ಯ ಚುನಾವಣೆಗಳಲ್ಲಿ ಜಂಟಿಯಾಗಿ ಗೆದ್ದಿದ್ದೇವೆ, ಸೋತಿದ್ದೇವೆ, ಅಷ್ಟೇ ಅಲ್ಲ ನಮ್ಮ ವಿರೋಧಿಗಳನ್ನು ಸೋಲಿಸಿದ್ದೇವೆ. ನಾವು ಸೋತಿದ್ದೇವೆ. ಗೆಲುವು-ಸೋಲು ನಮಗೆ ಹೊಸದಲ್ಲ. ಕಾರ್ಯಕರ್ತರನ್ನು ಯಾವ ರೀತಿ ಓಲೈಕೆ ಮಾಡಬೇಕೆಂಬುದು ನಮಗೆ ತಿಳಿದಿದೆ ಎಂದರು. ಮೋದಿ ಪ್ರಧಾನಿಯಾದ ನಂತರ ಗುಜರಾತ್, ಕಾಶ್ಮೀರ, ಉತ್ತರ ಪ್ರದೇಶ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇದೀಗ ನಮ್ಮ ಮುಂದಿರುವುದು ರಾಷ್ಟ್ರದಲ್ಲಿ ಶಾಂತಿ ನೆಲೆಸುವುದು. ಅದಕ್ಕಾಗಿ ಜಾತ್ಯಾತೀತ ಪಕ್ಷಗಳು ಒಂದಾಗುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.